ದೇಶ

ರೈತರ ಸೇವೆಗೆ ಸರ್ಕಾರ ಮುಡಿಪು: ಮೋದಿ ಭರವಸೆ

Nagaraja AB

ನವದೆಹಲಿ: ರಾಜ್ಯಸಭೆಯಲ್ಲಿ ಎರಡು ಕೃಷಿ ಮಸೂದೆಗಳು ಅಂಗೀಕಾರವಾದ ಹಿನ್ನೆಲೆಯಲ್ಲಿ  ಪ್ರಧಾನಮಂತ್ರಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದು, ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ) ಮುಂದುವರೆಯಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ನಾನು ಹಿಂದೆಯೂ ಹೇಳಿದ್ದೆ, ಈಗಲೂ  ಮತ್ತೊಮ್ಮೆ ಹೇಳುತ್ತಿದ್ದೇನೆ. ಎಂಎಸ್ಪಿ ವ್ಯವಸ್ಥೆ ಮುಂದುವರೆಯಲಿದೆ. ರೈತರ ಸೇವೆಗೆ ಸರ್ಕಾರ  ಮುಡಿಪಾಗಿದೆ,   ಅವರ ಆರ್ಥಿಕ ಅಭಿವೃದ್ದಿಗೆ ಏನೇನು ಸಾಧ್ಯವೋ ಎಲ್ಲವನ್ನೂ ಮಾಡುತ್ತೇವೆ ಎಂದು ಮೋದಿ ಭರವಸೆ ನೀಡಿದ್ದಾರೆ. ಈ ಮೂಲಕ ಕನಿಷ್ಠ ಬೆಂಬಲ ಬೆಲೆ ಆಧಾರದ ಮೇಲೆ ರೈತರ ಬೆಳೆ ಖರೀದಿ ಮುಂದುವರೆಯಲಿದೆ ಎಂದೂ ಅವರು ಟ್ವೀಟ್ ಮೂಲಕ  ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮೊದಲು  ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳನ್ನು ಮಂಡಿಸಿ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಇದೊಂದು ಐತಿಹಾಸಿಕ ಮಸೂದೆ. ಇವು ರೈತರ ಬದುಕಿನಲ್ಲಿ ಮಹತ್ವದ ಬದಲಾವಣೆ ತರಲಿದೆ. ರೈತರು ತಮ್ಮ ಉತ್ಪನ್ನಗಳನ್ನು ಯಾವುದೇ ಜಾಗದಲ್ಲಿ, ತಾವು ಬಯಸುವ ಯಾವುದೇ ವ್ಯಕ್ತಿಗೆ ಮಾರಾಟ ಮಾಡಬಹುದು ಎಂದು ತಿಳಿಸಿದರು. ತೋಮರ್ ಸಹ  ಎಂಎಸ್ಪಿ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.

SCROLL FOR NEXT