ದೇಶ

ಕೋವಿಡ್-19, ಆರ್ಥಿಕತೆ ಕುಸಿತ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಶಶಿ ತರೂರ್ ತೀವ್ರ ವಾಗ್ದಾಳಿ

Nagaraja AB

ನವದೆಹಲಿ: ಕೋವಿಡ್-19 ಹಾಗೂ ದೇಶದ ಆರ್ಥಿಕತೆ ನಿರ್ವಹಣೆ ವಿಚಾರವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ಶಶಿ ತರೂರ್ ಲೋಕಸಭೆಯಲ್ಲಿಂದು ತೀವ್ರ ವಾಗ್ದಾಳಿ ನಡೆಸಿದರು.

ಕೋವಿಡ್-19 ಸಾಂಕ್ರಾಮಿಕ ವಿಚಾರ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೋವಿಡ್-19 ಹಾಗೂ ಆರ್ಥಿಕತೆಯಲ್ಲಿ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಕೋವಿಡ್-19 ಸೋಂಕು ಹರಡುವಿಕೆಯನ್ನು ಮಿತಿಗೊಳಿಸುವಲ್ಲಿ ಯಶಸ್ವಿಯಾಗಿಲ್ಲ, ಅಥವಾ ಆರ್ಥಿಕತೆ ಪರಿಸ್ಥಿತಿಯೂ ಸುಧಾರಿಸಿಲ್ಲ, 41 ವರ್ಷಗಳಲ್ಲಿ ಮೊದಲ ಬಾರಿಗೆ ಜಿಡಿಪಿ ಕುಗ್ಗಿದೆ. ಉದ್ಯೋಗ ಬಿಕ್ಕಟ್ಟು ಮೊದಲೇ ಕೆಟ್ಟದಾಗಿದೆ, ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ನಿರ್ನಾಮಗೊಂಡಿದ್ದು, ವ್ಯಾಪಾರವು ಕುಸಿದಿದೆ ಮತ್ತು ನಿರೀಕ್ಷಿತ ರಾಷ್ಟ್ರೀಯ ಭವಿಷ್ಯಗಳು ಸಾಯುತ್ತಿವೆ ಎಂದು ಹೇಳಿದರು.

21 ದಿನಗಳ ಲಾಕ್ ಡೌನ್ ಜಾರಿಗೂ ಮುನ್ನಾ ರಾಜ್ಯಗಳ ಜೊತೆಗೆ ಕೇಂದ್ರ ಸರ್ಕಾರ ಸಮಾಲೋಚನೆ ನಡೆಸಿಲ್ಲ, ಜನತಾ ಕರ್ಫ್ಯೂಗೆ  ಮೊದಲು ಮೂರು ದಿನಗಳ ನೋಟಿಸ್ ನೀಡಲಾಗಿದ್ದರೂ, ಹೆಚ್ಚಿನ ವ್ಯಕ್ತಿಗಳು ಹೇಗಾದರೂ ಮನೆಯಲ್ಲಿ ಸಾಕಷ್ಟು ಸಮಯ ಕಳೆಯುತ್ತಾರೆ. ನಂತರ ದೇಶಾದ್ಯಂತ ಲಾಕ್ ಡೌನ್ ಜಾರಿಯಾದ ನಂತರ ಪರಿಸ್ಥಿತಿ ಭಯಾನಕವಾಗಿತ್ತು ಎಂದರು.

ಪ್ರಾರಂಭದಲ್ಲಿ 21 ದಿನಗಳಲ್ಲಿ ಕೋವಿಡ್-19 ನಿಯಂತ್ರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದರು. 180 ದಿನಗಳು ಕಳೆದಿವೆ, ದೇಶದಲ್ಲಿ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಿಶ್ವದಲ್ಲಿಯೇ ನಂಬರ್ 2 ಸ್ಥಾನದಲ್ಲಿದ್ದು, ನಂಬರ್ 1 ಸ್ಥಾನದತ್ತ ಸಾಗುತ್ತಿದೆ. ಪ್ರತಿದಿನ ಒಂದು ಲಕ್ಷದ ಹತ್ತಿರ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಇತರ ರಾಷ್ಟ್ರಗಳಿಗಿಂತ ನಮ್ಮ ದೇಶದ ಆರ್ಥಿಕತೆ ತೀವ್ರ ತೊಂದರೆಯಲ್ಲಿದೆ ಎಂದು ಹೇಳಿದರು.

SCROLL FOR NEXT