ದೇಶ

'ಪ್ರಜಾಪ್ರಭುತ್ವದ ಕಗ್ಗೊಲೆ' ಮುಂದುವರೆದಿದೆ: ರಾಜ್ಯಸಭಾ ಸದಸ್ಯರ ಅಮಾನತಿಗೆ ಕಾಂಗ್ರೆಸ್ ಆಕ್ರೋಶ

Lingaraj Badiger

ನವದೆಹಲಿ: ತನ್ನ ಮೂವರು ರಾಜ್ಯಸಭಾ ಸದಸ್ಯರು ಸೇರಿದೆಂತೆ ಪ್ರತಿಕ್ಷಗಳ ಎಂಟು ಸದಸ್ಯರನ್ನು ಅಮಾನತುಗೊಳಿಸಿದ ಕಾಂಗ್ರೆಸ್ ಸೋಮವಾರ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಮುಂದುವರೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕೃಷಿ ಮಸೂದೆ ವಿಚಾರವಾಗಿ ರಾಜ್ಯಸಭೆಯಲ್ಲಿ ಉಂಟಾದ ಕೋಲಾಹಲಕ್ಕೆ ಸಂಬಂಧಿಸಿದಂತೆ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು 8 ಮಂದಿ ರಾಜ್ಯಸಭಾ ಸದಸ್ಯರನ್ನು ಅಮಾನತು ಮಾಡಿದ್ದಾರೆ.

ಕೃಷಿ ಮಸೂದೆ ಅಂಗೀಕಾರದ ವೇಳೆ ಕೋಲಾಹಲ ಸೃಷ್ಟಿಸಿ ಕಲಾಪಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ಮತ್ತು ಉಪ ಸಭಾಪತಿ ಅವರನ್ನು ಅನುಚಿತವಾಗಿ ನಡೆಸಿಕೊಂಡ ಆರೋಪ ಮತ್ತು ಅಶಿಸ್ತಿನ ವರ್ತನೆ ಮೇರೆಗೆ ರಾಜ್ಯಸಭಾ ಸದಸ್ಯರಾದ ಡೆರೆಕ್ ಒ ಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ.ರಾಗೇಶ್, ರಿಪೂನ್  ಬೋರಾ, ಡೋಲಾ ಸೇನ್, ಸೈಯದ್ ನಜೀರ್ ಹುಸೇನ್ ಮತ್ತು ಎಲಮರನ್ ಕರೀಮ್ ಅವರನ್ನು ಒಂದು ವಾರ ಅಮಾನತುಗೊಳಿಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ" ಮುಂದುವರಿಯುತ್ತಿದೆ. ಆರಂಭದಲ್ಲಿ ಬಾಯಿ ಮುಚ್ಚಿಸುವ ಯತ್ನ, ನಂತರ ಸಂಸದರನ್ನು ಅಮಾನತುಗೊಳಿಸುವುದರ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಕೃಷಿ ಮಸೂದೆಗಳು ರೈತರ ವಿರುದ್ಧದ ಡೆತ್‌ ವಾರೆಂಟ್ ಆಗಿದೆ. ಭೂಮಿಯಿಂದ ಚಿನ್ನವನ್ನು ಬೆಳೆಯುವ ರೈತ ರಕ್ತ ಕಣ್ಣೀರು ಹರಿಸುವಂತೆ ಮೋದಿ ಸರ್ಕಾರ ಮಾಡಿದೆ ಎಂದು ಕಿಡಿಕಾರಿದ್ದಾರೆ.

SCROLL FOR NEXT