ದೇಶ

ಭಿವಾಂಡಿಯಲ್ಲಿ ಬಹುಮಹಡಿ ಕಟ್ಟಡ ಕುಸಿತ; ಸಾವಿನ ಸಂಖ್ಯೆ 18ಕ್ಕೆ ಏರಿಕೆ, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

Srinivasamurthy VN

ಮುಂಬೈ: ಮಹಾರಾಷ್ಟ್ರದ ಭಿವಾಂಡಿಯಲ್ಲಿ ಸಂಭವಿಸಿದ್ದ ಬಹುಮಹಡಿ ಕಟ್ಟಡ ಪ್ರಕರಣದಲ್ಲಿ ಈವರೆಗೂ ಸಾವನ್ನಪ್ಪಿರುವವರ ಸಂಖ್ಯೆ 18ಕ್ಕೆ ಏರಿಕೆಯಾಗಿದ್ದು, ಸತತ 24 ಗಂಟೆಗಳ ನಂತರವೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ವಾಣಿಜ್ಯ ನಗರಿ ಮುಂಬೈ ಸಮೀಪದಲ್ಲೇ ಇರುವ ಥಾಣೆ ಜಿಲ್ಲೆಯ ಭಿವಾಂಡಿಯಲ್ಲಿರುವ ಪಟೇಲ್ ಕಾಂಪೌಂಡ್ ಪ್ರದೇಶದಲ್ಲಿ ನಿನ್ನೆ ಮೂರು ಮಹಡಿ ಕಟ್ಟದ ಕುಸಿದು ಬಿದ್ದಿತ್ತು. ಈ ವೇಳೆ ಸುಮಾರು 20ರಿಂದ 25 ಮಂದಿ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದ್ದರು. ನಿನ್ನೆ ಮುಂಜಾನೆ ಸುಮಾರು 3.30ರ ಹೊತ್ತಿನಲ್ಲಿ  ಈ ಘಟನೆ ನಡೆದಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಸಿಬ್ಬಂದಿ ಸ್ಥಳಕ್ಕೆ ಧೌಡಾಯಿಸಿ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆ ಮಾಡುತ್ತಿದೆ. ಈ ವರೆಗೂ 18 ದೇಹಗಳನ್ನು ಸಿಬ್ಬಂದಿ ಹೊರಗೆ ತೆಗೆದಿದ್ದು, ಅಂತೆಯೇ ಮಗು ಸೇರಿದಂತೆ 5 ಮಂದಿಯನ್ನು ರಕ್ಷಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಥಾಣೆ ಮುನ್ಸಿಪಲ್ ಕಾರ್ಪೋರೇಷನ್ ವಕ್ತಾರರು ರಕ್ಷಣಾ ಕಾರ್ಯಾಚರಣೆ ಸಾಗಿದ್ದು, ಈ ವರೆಗೂ 18 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಅಂತೆಯೇ ಅವಶೇಷಗಳಡಿಯಲ್ಲಿ ಸಿಲುಕಿದ್ದ 5 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ಸಿಲುಕಿರುವ ಸಾಧ್ಯತೆ ಇದ್ದು ಕಾರ್ಯಾಚರಣೆ  ಸಾಗಿದೆ ಎಂದು ಮಾಹಿತಿ ನೀಡಿದ್ದಾರೆ.

SCROLL FOR NEXT