ದೇಶ

ಪ್ರತಿಪಕ್ಷಗಳ ಬಹಿಷ್ಕಾರವನ್ನೇ ಬಂಡವಾಳ ಮಾಡಿಕೊಂಡು 3 ಗಂಟೆಯಲ್ಲಿ 7 ಮಸೂದೆ ಪಾಸ್ ಮಾಡಿದ ಕೇಂದ್ರ

Lingaraj Badiger

ನವದೆಹಲಿ: ಪ್ರತಿಪಕ್ಷಗಳ ಕಲಾಪ ಬಹಿಷ್ಕರಿಸಿದ್ದನ್ನೇ ಬಂಡವಾಳ ಮಾಡಿಕೊಂಡ ಕೇಂದ್ರ ಸರ್ಕಾರ ಮಂಗಳವಾರ ಮೂರು ಗಂಟೆಯಲ್ಲೇ ದಾಖಲೆಯ ಬರೋಬ್ಬರಿ ಏಳು ಮಂಸೂದೆಗಳನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿದೆ.

ಕೃಷಿ ಮಸೂದೆ ವಿಚಾರವಾಗಿ ರಾಜ್ಯಸಭೆಯಲ್ಲಿ ಉಂಟಾದ ಕೋಲಾಹಲಕ್ಕೆ ಸಂಬಂಧಿಸಿದಂತೆ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ಪ್ರತಿಪಕ್ಷಗಳ ಎಂಟು ಸದಸ್ಯರನ್ನು ಅಮಾನತು ಮಾಡಿದ್ದಾರೆ. ಈ ನಿರ್ಧಾರ ಖಂಡಿಸಿ ಅಮಾನತುಗೊಂಡ ಸದಸ್ಯರು ಆಹೋರಾತ್ರಿ ಧರಣಿ ನಡೆಸಿದ್ದರು. ಈಗ ತಮ್ಮ ಧರಣಿ ಅಂತ್ಯಗೊಳಿಸಿದ್ದು, ವಿಪಕ್ಷ ನಾಯಕರು ಆರಂಭಿಸಿರುವ ಅಧಿವೇಶನ ಬಹಿಷ್ಕಾರ ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ.

ಪ್ರತಿಪಕ್ಷಗಳ ಅನುಪಸ್ಥಿತಿಯ ಮಧ್ಯೆ, ಮೂರು ಗಂಟೆಗಳ ಅವಧಿಯಲ್ಲಿ ರಾಜ್ಯಸಭೆಯು ಆರು ನಿರ್ಣಾಯಕ ಮಸೂದೆಗಳನ್ನು ಇಂದು ಅಂಗೀಕರಿಸಿತು.

ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಮಸೂದೆ 2020, ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಮಸೂದೆ 2020, ಕಂಪನಿಗಳ (ತಿದ್ದುಪಡಿ) ಮಸೂದೆ 2020, ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ 2020, ಅಗತ್ಯ ಸರಕುಗಳ(ತಿದ್ದುಪಡಿ) ಮಸೂದೆ 2020 ಹಾಗೂ ಭಾರತೀಯ ಮಾಹಿತಿ ತಂತ್ರಜ್ಞಾನ ಕಾನೂನುಗಳ ತಿದ್ದುಪಡಿ (ತಿದ್ದುಪಡಿ) ಮಸೂದೆ 2020 ಅನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. 

ನಿನ್ನೆ ತಡರಾತ್ರಿ 2020ರ ಸಾಂಕ್ರಾಮಿಕ ರೋಗಗಳ(ತಿದ್ದುಪಡಿ) ಮಸೂದೆ ಲೋಕಸಭೆಯ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದ್ದು, ಇದನ್ನು ಸಹ ಇಂದೇ ರಾಜ್ಯಸಭೆಯಲ್ಲಿ ಮಂಡಿಸಿ, ಅಂಗೀಕಾರ ಪಡೆಯುವ ಸಾಧ್ಯತೆ ಇದೆ. 

SCROLL FOR NEXT