ದೇಶ

ಅಮಾನತುಗೊಂಡ ರಾಜ್ಯಸಭೆ ಸದಸ್ಯರೊಂದಿಗೆ ಉಪಸಭಾಧ್ಯಕ್ಷರ ಚಾಯ್ ಪೇ ಚರ್ಚಾ: ಪ್ರಧಾನಿ ಮೋದಿ ಮೆಚ್ಚುಗೆ

Srinivas Rao BV

ನವದೆಹಲಿ: ರಾಜ್ಯಸಭೆಯಿಂದ ಅಮಾನತುಗೊಂಡು ಸಂಸತ್ ಆವರಣದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದ ಸದಸ್ಯರಿಗೆ ಖುದ್ದು ರಾಜ್ಯಸಭೆಯ ಉಪಸಭಾಧ್ಯಕ್ಷ ಹರಿವಂಶ್ ಅವರು ಚಾಯ್ ನೀಡಿ ಮಾತನಾಡಿದ್ದರು. 

ಹರಿವಂಶ್ ಅವರ ಈ ನಡೆಯ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ,  ಹರಿವಂಶ್ ಅವರ ನಡೆ ಸ್ಪೂರ್ತಿದಾಯಕವಾದದ್ದು, ಮುತ್ಸದ್ದಿ ನಡೆ ಎಂದು ಬಣ್ಣಿಸಿ, ಪ್ರತಿಯೊಬ್ಬ ಪ್ರಜಾಪ್ರಭುತ್ವದ ಪ್ರೇಮಿಯೂ ಹೆಮ್ಮೆಪಡುವಂಥದ್ದಾಗಿದೆ ಎಂದು ಹೇಳಿದ್ದಾರೆ. 

ತಮ್ಮ ಮೇಲೆ ದಾಳಿ ನಡೆಸಲು ಮುಂದಾಗಿ ಅವಮಾನ ಮಾಡಿದವರಿಗೆ ಸ್ವತಃ ಟೀ ನೀಡುವುದು ಹರಿವಂಶ್ ಅವರ ದೊಡ್ಡ ಮನಸ್ಸನ್ನು, ವಿನಮ್ರ ಮನಸ್ಸನ್ನು ತೋರುತ್ತದೆ ಎಂದು ಹೇಳಿದ್ದಾರೆ. 

ಶತಮಾನಗಳಿಂದ ಬಿಹಾರ ನಮಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಸುತ್ತಿದೆ. ಈ ಅದ್ಭುತ ನೀತಿಗಳ ಸಾಲಿನಲ್ಲಿ ಹರಿವಂಶ್ ಅವರು ತಮ್ಮ ಮುತ್ಸದ್ದಿತನದಿಂದ ಪ್ರಜಾಪ್ರಭುತ್ವದ ಪ್ರೇಮಿಗಳು ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಮೋದಿ ಹೇಳಿದ್ದಾರೆ. 

ಭಾನುವಾರದಂದು ರಾಜ್ಯಸಭೆಯಲ್ಲಿ 2 ಮಸೂದೆಗಳ ಅಂಗೀಕಾರದ ವೇಳೆ ರಾಜ್ಯಸಭೆಯಲ್ಲಿ ಸಭಾಧ್ಯಕ್ಷರ ಮೈಕ್ ಕಿತ್ತು, ರೂಲ್ ಬುಕ್ ನ್ನು ಹರಿದು ದುರ್ವರ್ತನೆ ತೋರಿದ 8 ಸಂಸತ್ ಸದಸ್ಯರನ್ನು ಅಮಾನತು ಮಾಡಲಾಗಿತ್ತು. ಇದನ್ನು ವಿರೋಧಿಸಿ ಸಂಸತ್ ಸದಸ್ಯರು ಸಂಸತ್ ಆವರಣದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು.

SCROLL FOR NEXT