ದೇಶ

ತರಾತುರಿಯಲ್ಲಿ ದಾಖಲೆಯ ಮಸೂದೆಗಳನ್ನು ಅಂಗೀಕರಿಸಿದ ನಂತರ ರಾಜ್ಯಸಭೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

Lingaraj Badiger

ನವದೆಹಲಿ: ಪ್ರತಿಪಕ್ಷಗಳು ಕಲಾಪ ಬಹಿಷ್ಕರಿಸಿದ್ದನ್ನೇ ಬಂಡವಾಳ ಮಾಡಿಕೊಂಡ ಕೇಂದ್ರ ಸರ್ಕಾರ ತರಾತುರಿಯಲ್ಲಿ ಹಲವು ಮಸೂದೆಗಳನ್ನು ಅಂಗೀಕರಿಸಿದ ನಂತರ ಬುಧವಾರ ರಾಜ್ಯಸಭಾ ಕಲಾಪವನ್ನು ಎಂಟು ದಿನಗಳ ಮುನ್ನವೇ ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ಇಂದು ರಾಜ್ಯಸಭೆಯಲ್ಲಿ ಮೂರು ಕಾರ್ಮಿಕ ಮಸೂದೆ ಹಾಗೂ ವಿದೇಶಿ ದೇಣಿಗೆ(ನಿಯಂತ್ರಣ) ತಿದ್ದುಪಡಿ ಮಸೂದೆ, 2020 ಅನ್ನು ಅಂಗೀಕರಿಸಿದ ನಂತರ ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅವರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ನಿನ್ನೆ ಪ್ರತಿಪಕ್ಷಗಳ ಅನುಪಸ್ಥಿತಿಯ ಮಧ್ಯೆ ರಾಜ್ಯಸಭೆಯಲ್ಲಿ ಕೇವಲ ಮೂರು ಗಂಟೆಯಲ್ಲಿ ದಾಖಲೆಯ 9 ಮಸೂದೆಗಳನ್ನು ಅಂಗೀಕರಿಸಲಾಗಿತ್ತು. ಇದು ಐದು ಮಸೂದೆಗಳನ್ನು ಅಂಗೀಕರಿಸುವದರೊಂದಿಗೆ ಮುಂಗಾರು ಅಧಿವೇಶನಕ್ಕೆ ತೆರೆ ಬಿದ್ದಿದೆ.

ಸಂಸದರಲ್ಲಿ ಕೊರೋನಾ ವೈರಸ್ ಹರಡುವ ಆತಂಕದ ಮಧ್ಯೆಯೇ ಆರಂಭವಾದ ಸಂಸತ್ ಮುಂಗಾರು ಅಧಿವೇಶನ ಈಗ ಪ್ರತಿಪಕ್ಷಗಳ ಕೋಲಾಹಲದಿಂದಾಗಿ ಮುಕ್ತಾಯಗೊಂಡಿದೆ.

ಸೆಪ್ಟೆಂಬರ್ 14 ರಿಂದ ಪ್ರಾರಂಭವಾದ ಮುಂಗಾರು ಅಧಿವೇಶನವು ಉಭಯ ಸದನಗಳಲ್ಲಿ ಹಲವಾರು ಮಸೂದೆಗಳನ್ನು ಅಂಗೀಕರಿಸಿತು. ಇದರಲ್ಲಿ ಇತ್ತೀಚೆಗೆ ಹೊರಡಿಸಲಾದ ಸುಗ್ರೀವಾಜ್ಞೆಗಳು ಸೇರಿವೆ. ಪ್ರಸಕ್ತ ಅಧಿವೇಶನ ಅಕ್ಟೋಬರ್ 1ಕ್ಕೆ ಅಂತ್ಯಗೊಳ್ಳಬೇಕಿತ್ತು. ಆದರೆ ಕೊರೋನಾ ಆತಂಕ ಮತ್ತು ಪ್ರತಿಪಕ್ಷಗಳ ಗದ್ದಲ, ಧರಣಿಯಿಂದಾಗಿ ಇಂದೇ ಅಂತ್ಯಗೊಂಡಿದೆ.

SCROLL FOR NEXT