ದೇಶ

ಕೃಷಿ ಮಸೂದೆಗೆ ಮಹಾ ವಿಕಾಸ್ ಅಗಾಡಿ ವಿರೋಧ, ರಾಜ್ಯದಲ್ಲಿ ಜಾರಿ ಅಸಂಭವ: ಕಾಂಗ್ರೆಸ್

Lingaraj Badiger

ಮುಂಬೈ: ಕಾಂಗ್ರೆಸ್ ಜೊತೆಗೆ ಮಹಾರಾಷ್ಟ್ರ ವಿಕಾಸ್ ಅಗಾಡಿ ಸಹ ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸುತ್ತಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯ ಸಚಿವ ಬಾಲಾಸಾಹೇಬ್ ಥೋರತ್ ಅವರು ಶುಕ್ರವಾರ ಹೇಳಿದ್ದಾರೆ.

"ಸಂಸತ್ತು ಅಂಗೀಕರಿಸಿದ ಕೃಷಿ ಮಸೂದೆಗಳನ್ನು ನಾವು ವಿರೋಧಿಸುತ್ತೇವೆ. ಮಹಾರಾಷ್ಟ್ರ ವಿಕಾಸ್ ಅಗಾಡಿ ಕೂಡ ಇದಕ್ಕೆ ವಿರುದ್ಧವಾಗಿದೆ. ಇದನ್ನು ರಾಜ್ಯದಲ್ಲಿ ಜಾರಿಗೊಳಿಸದಿರಲು ನಾವು ನಿರ್ಧರಿಸುತ್ತೇವೆ" ಎಂದು ಥೋರತ್ ತಿಳಿಸಿದ್ದಾರೆ.

ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ(ಪ್ರಚಾರ ಮತ್ತು ಸೌಲಭ್ಯ) ಮಸೂದೆ, 2020 ಮತ್ತು ರೈತ(ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದದ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ, 2020 ಅನ್ನು ಸಂಸತ್ತು ಭಾನುವಾರ ಅಂಗೀಕರಿಸಿದೆ.

ಇದಕ್ಕು ಮುನ್ನ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯಿಂದ ರೈತರು ಗುಲಾಮಗಿರಿಗೆ ಒಳಗಾಗಗುತ್ತಾರೆ ಎಂದು ಕಿಡಿ ಕಾರಿದ್ದರು.

ದೇಶಾದ್ಯಂತ ರೈತರು ನಡೆಸುತ್ತಿರುವ ಭಾರತ್ ಬಂದ್ ಗೆ ಬೆಂಬಲ ವ್ಯಕ್ತ ಪಡಿಸಿರುವ ರಾಹುಲ್ ಗಾಂಧಿ ಮೂರು ಮಸೂದೆಗಳು ರೈತ ವಿರೋಧಿಯಾಗಿವೆ ಎಂದು ಹೇಳಿದ್ದಾರೆ.

SCROLL FOR NEXT