ದೇಶ

ಬಾಬರಿ ತೀರ್ಪಿನ ವಿರುದ್ಧ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಮುಂದಾದ ಮುಸ್ಲಿಂ ಕಾನೂನು ಮಂಡಳಿ

Lingaraj Badiger

ಲಖನೌ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ಸಿಬಿಐ ನ್ಯಾಯಾಲಯ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.

ಸಿಬಿಐ ಕೋರ್ಟ್ ತೀರ್ಪಿನ ಬಗ್ಗೆ ಮುಸ್ಲಿಂ ಧಾರ್ಮಿಕ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಮಗೆ ಅನ್ಯಾಯವಾಗಿದ್ದು, ಉನ್ನತ ಕೋರ್ಟ್ ನಲ್ಲಿ ಪ್ರಶ್ನಿಸಬೇಕು ಎಂದಿದ್ದಾರೆ.

ಮುಸ್ಲಿಮರ ಪರವಾಗಿ ಅಯೋಧ್ಯೆ ವಿಷಯದ ಬಗ್ಗೆ ಕಾನೂನು ಹೋರಾಟದ ನೇತೃತ್ವ ವಹಿಸಿದ ಪ್ರಮುಖರಲ್ಲಿ ಒಬ್ಬರಾದ ಬಾಬರಿ ಮಸೀದಿ ಕ್ರಿಯಾ ಸಮಿತಿ ಸಂಚಾಲಕ ಜಫಾರ್ಯಾಬ್ ಜಿಲಾನಿ, ಸಿಬಿಐ ನ್ಯಾಯಾಲಯದ ತೀರ್ಪನ್ನು ತಿರಸ್ಕರಿಸಿದ್ದಾರೆ.

“ತೀರ್ಪು ಸಂಪೂರ್ಣವಾಗಿ ತಪ್ಪಾಗಿದೆ. ಇದು ಸಾಕ್ಷ್ಯವನ್ನು ಆಧರಿಸಿಲ್ಲ ಅಥವಾ ಕಾನೂನಿನ ಪ್ರಕಾರವೂ ಇಲ್ಲ. ಇದು ದೇಶದ ಅಪರಾಧ ನ್ಯಾಯ ವ್ಯವಸ್ಥೆಗೆ ವಿರುದ್ಧವಾಗಿದೆ. ಸಾಕ್ಷ್ಯಾಧಾರದ ಕೊರತೆಯ ಬಗ್ಗೆ ನ್ಯಾಯಾಲಯದ ಅವಲೋಕನ ತಪ್ಪಾಗಿದೆ. ಆರೋಪ ಸಾಬೀತುಪಡಿಸಲು ಅಪಾರ ಪುರಾವೆಗಳಿವೆ. ಈ ತೀರ್ಪನ್ನು ಪ್ರಶ್ನಿಸಿ ನಾವು ಹೈಕೋರ್ಟ್ ಮೊರೆ ಹೋಗುತ್ತೇವೆ” ಎಂದು ಜಿಲಾನಿ ಹೇಳಿದ್ದಾರೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣದ 32 ಆರೋಪಿಗಳನ್ನು ಖುಲಾಸೆಗೊಳಿಸಿದ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಮೌಲಾನ ಖಲಿದ್‌ ರಶೀದ್‌ ಫಿರಂಗಿ ಮಹಾಲಿ, 1992ರ ಡಿ.6ರಂದು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಹೇಗೆ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಲಾಯಿತು ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.

2019ರ ನವೆಂಬರ್‌ 9ರಂದು ರಾಮಜನ್ಮಭೂಮಿ ವಿವಾದದ ತೀರ್ಪು ಪ್ರಕಟಿಸಿದ್ದ ಸುಪ್ರೀಂಕೋರ್ಟ್‌, ಮಸೀದಿಯ ಧ್ವಂಸ ಕಾನೂನು ಬಾಹಿರ ಕೃತ್ಯ ಎಂದು ಹೇಳಿತ್ತು ಎಂದು ಮಹಾಲಿ ತಿಳಿಸಿದ್ದಾರೆ.

SCROLL FOR NEXT