ದೇಶ

ಬಾಬರಿ ಮಸೀದಿಯನ್ನು ಜಾದೂ ಮೂಲಕ ಧ್ವಂಸಗೊಳಿಸಲಾಗಿದೆಯೇ? ಇಂದು ನ್ಯಾಯಾಂಗ ವ್ಯವಸ್ಥೆಯಲ್ಲಿ ಕರಾಳ ದಿನ: ಓವೈಸಿ

Lingaraj Badiger

ಹೈದರಾಬಾದ್: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಎಲ್ಲಾ 32 ಆರೋಪಿಗಳನ್ನು ಖುಲಾಸೆಗೊಳಿಸಿದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಎಐಎಂಐ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಅವರು, ಮಸೀದಿಯನ್ನು ಜಾದೂವಿನ ಮೂಲಕ ನೆಲಸಮಗೊಳಿಸಲಾಗಿದೆಯೇ? ಎಂದು ಬುಧವಾರ ಪ್ರಶ್ನಿಸಿದ್ದಾರೆ.

ಸಿಬಿಐ ವಿಶೇಷ ನ್ಯಾಯಾಲಯ 28 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಇಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಪ್ರಕಟಿಸಿದ್ದು, 32 ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಕೋರ್ಟ್ ತೀರ್ಪಿನ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಓವೈಸಿ, ಇಂದು ಭಾರತ ನ್ಯಾಯಾಂಗ ವ್ಯವಸ್ಥೆಯಲ್ಲಿ ಕರಾಳ ದಿನ ಎಂದಿದ್ದಾರೆ.

ಸುಪ್ರೀಂ ಕೋರ್ಟ್ ಬಾಬರಿ ಮಸೀದಿಯನ್ನ ಧ್ವಂಸಗೊಳಿಸಿದ್ದು ತಪ್ಪು ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಇಂದು ಬಂದ ತೀರ್ಪು ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಕರಾಳ ದಿನವಾಗಿ ದಾಖಲಾಗಿದೆ. ಹಾಗಾದರೆ ಮಸೀದಿ ಧ್ವಂಸಗೊಳಿಸಿದ್ದು ಯಾರು? ಜಾದೂ ಮೂಲಕ ಮಸೀದಿ ಧ್ವಂಸಗೊಳಿಸಲಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಮಸೀದಿಯಲ್ಲಿ ಮೂರ್ತಿ ತಂದಿಟ್ಟಿದ್ಯಾರು? ಬೀಗ ಮುರಿದಿದ್ದು ಹೇಗೆ? ಮಸೀದಿ ಕೆಡವಿದ್ದು ಹೇಗೆ ಎಂದು ಓವೈಸಿ ಪ್ರಶ್ನೆ ಮಾಡಿದ್ದಾರೆ. ಈ ಎಲ್ಲವನ್ನು ಜಾದೂವಿನ ಮೂಲಕ ಮಾಡಲಾಯಿತಾ? ದೇಶದ ಇತಿಹಾಸದಲ್ಲಿ ಸೆಪ್ಟೆಂಬರ್ 30 ಕರಾಳ ದಿನವಾಗಿ ಉಳಿಯಲಿದೆ. ಎಲ್.ಕೆ. ಅಡ್ವಾಣಿಯವರ ರಥಯಾತ್ರೆ ವೇಳೆ ರಕ್ತದ ಹೊಳೆಯೇ ಹರಿದಿತ್ತು. ಎಲ್ಲ ಘಟನೆಗಳು ಪೂರ್ವಯೋಜಿತವಾಗಿದರೂ ಇಂದು ದಿಢೀರ್ ಎಲ್ಲವೂ ಬದಲಾಗಿದೆ ಎಂದು ಓವೈಸಿ ಹೇಳಿದ್ದಾರೆ.

SCROLL FOR NEXT