ದೇಶ

ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣ ಎಸ್ಐಟಿ ತನಿಖೆಗೆ; 7 ದಿನಗಳಲ್ಲಿ ವರದಿ ಸಲ್ಲಿಸಲು ಯೋಗಿ ಆದಿತ್ಯನಾಥ್ ಸೂಚನೆ

Manjula VN

ಲಖನೌ: ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಎಸ್'ಐಟಿ ತನಿಖೆಗೆ ವಹಿಸಿದ್ದಾರೆ. 

ಮೂವರು ಸದಸ್ಯರನ್ನೊಳಗೊಂಡ ವಿಶೇಷ ತನಿಖಾ ದಳ ಪ್ರಕರಣದ ತನಿಖೆ ನಡೆಸಲಿದ್ದಾರೆ. ಉತ್ತರಪ್ರದೇಶ ಗೃಹ ಇಲಾಖೆ ಮುಖ್ಯ ಕಾರ್ಯದರ್ಶಿ ಭಗವಾನ್ ಸ್ವರೂಪ್, ಚಂದ್ರಪ್ರಕಾಶ್, ಡಿಐಜಿ ಪ್ರಕರಣದ ತನಿಖೆ ನಡೆಸಲಿದ್ದಾರೆಂದು ತಿಳಿದುಬಂದಿದೆ. 

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಿಎಂ ಯೋಗಿ ಆದಿತ್ಯನಾಥ್ ಅವರು, ಪ್ರಕರಣದ ತನಿಖೆಯನ್ನು ಮೂವರು ಸದಸ್ಯರನ್ನೊಳಗೊಂಡ ಎಸ್ಐಟಿಗೆ ವಹಿಸಲಾಗಿದ್ದು, ತನಿಖಾ ದಳಕ್ಕೆ ಮುಂದಿನ 7 ದಿನಗಳೊಳಗಾಗಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. 

ಪ್ರಕರಣ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನನ್ನೊಂದಿಗೆ ಮಾತುಕತೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆಂದು ಸಿಎಂ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ. 

2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಗ್ಯಾಂಗ್​ರೇಪ್​ ಮಾದರಿಯಲ್ಲೇ ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದಿದ್ದು, ಸೆ. 14ರಂದು ಯುವತಿಯು ತಮ್ಮ ಜಮೀನಿನಲ್ಲಿ ತಾಯಿಯೊಂದಿಗೆ ಮೇವು ತರಲು ಹೋಗಿದ್ದಾಗ ನಾಲ್ವರು ಕಾಮುಕರು ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ. ಅಲ್ಲದೆ, ಆಕೆಯ ನಾಲಿಗೆಯನ್ನು ಕತ್ತರಿಸಿದ್ದಾರೆ. ಆಕೆಯ ಬೆನ್ನುಮೂಳೆ ಮತ್ತು ಕುತ್ತಿಗೆಗೆ ಹಾನಿ ಮಾಡಿದ್ದಾರೆ. ಗಂಭೀರ ಗಾಯಗಳಿಂದ ದೆಹಲಿಯ ಸಫ್ದಾರ್​ ಜಂಗ್​ ಆಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದರು. 

SCROLL FOR NEXT