ದೇಶ

ಬಂಗಾಳ ಚುನಾವಣೆ: ಮಿಥುನ್ ಚಕ್ರವರ್ತಿ ರೋಡ್ ಶೋಗೆ ಅನುಮತಿ ನಿರಾಕರಣೆ, ಕಾರ್ಯಕರ್ತರ ಪ್ರತಿಭಟನೆ 

Nagaraja AB

ಕೊಲ್ಕತ್ತಾ: ಇತ್ತೀಚಿಗೆ ಕೇಸರಿ ಪಕ್ಷಕ್ಕೆ ಸೇರ್ಪಡೆಯಾದ ಬಾಲಿವುಡ್ ಸೂಪರ್ ಸ್ಟಾರ್ ಮಿಥುನ್ ಚಕ್ರವರ್ತಿ ಬೆಹಲಾ ಪ್ರದೇಶದಲ್ಲಿ ರೋ್ಡ್ ಶೋ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಇದರಿಂದಾಗಿ ಪಕ್ಷದ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಬಿಜೆಪಿ ಟಿಕೆಟ್ ನಿಂದ ಬೆಹಲಾ ಪಾಸ್ಚಿಮ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ನಟ- ರಾಜಕಾರಣಿ ಶ್ರಬಂತಿ ಚಟರ್ಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

ಯಾವುದೇ ಕಾರಣವಿಲ್ಲದೆ ನನ್ನ ಕ್ಷೇತ್ರದಲ್ಲಿ ಮಿಥುನ್ ಚಕ್ರವರ್ತಿ ಪ್ರಚಾರ ನಡೆಸಲು ಕೊಲ್ಕತ್ತಾ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ. ಪ್ರಚಾರದಿಂದ ತಡೆಯುವ ಇಂತಹ ಅಪ್ರಜಾಸತಾತ್ಮಕ ಕೃತ್ಯಗಳಿಂದ ಟಿಎಂಸಿ ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ರಾಜ್ಯಸರ್ಕಾರಕ್ಕೆ ಅಧಿಕಾರ ಕಳೆದುಕೊಳ್ಳುವ ಭಯ ಕಾಡುತ್ತಿದೆ ಎಂದು ಬಂಗಾಳದ ಪ್ರಸಿದ್ಧ ನಟ ಶ್ರಬಂತಿ ಹೇಳಿದ್ದಾರೆ.

ಪಾರ್ನಶ್ರೀ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದ ಬಿಜೆಪಿ ಪಕ್ಷದ ಕಾರ್ಯಕರ್ತರು ಆಡಳಿತರೂಢ ಟಿಎಂಸಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಸೂಪರ್ ಸ್ಟಾರ್ ಮಿಥುನ್ ಚಕ್ರವರ್ತಿ, ಬೆಹಲಾದಲ್ಲಿನ ರೋಡ್ ಶೋಗೆ ಪೊಲೀಸರು ಅನುಮತಿ ನಿರಾಕರಿಸಿದ ನಂತರ  ಮನೆ ಮನೆ ಪ್ರಚಾರ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಲಾಗಿತ್ತು. ಅದಕ್ಕೂ ಕೊನೆ ಕ್ಷಣದಲ್ಲಿ ಅವಕಾಶ ನೀಡಲಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ಕೊಲ್ಕತ್ತಾ ಪೊಲೀಸರು ನಿರಾಕರಿಸಿದ್ದಾರೆ.

SCROLL FOR NEXT