ದೇಶ

ಬಂಗಾಳದಲ್ಲಿ ನಿಜವಾದ ಬದಲಾವಣೆಯ ಮಹಾಯಾಗ ಮೇ 2 ರಿಂದ ಆರಂಭ: ಪ್ರಧಾನಿ ಮೋದಿ

Lingaraj Badiger

ಕೃಷ್ಣನಗರ: ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರದಿಂದ ಪಶ್ಚಿಮ ಬಂಗಾಳದಲ್ಲಿ ಮೇ 2ರಿಂದ ನಿಜವಾದ ಬದಲಾವಣೆಯ ಮಹಾಯಾಗ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ. 

ಇಂದು ಪಶ್ಚಿಮ ಬಂಗಾಳದ ಕೃಷ್ಣನಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಬಿಜೆಪಿಯ 'ಎರಡು ಎಂಜಿನ್ ಸರ್ಕಾರ' ಬಂಗಾಳದ ಸಿಂಡಿಕೇಟ್ ರಾಜ್ ಅನ್ನು ಮುರಿಯಲಿದೆ. ಟಿಎಂಸಿಯ ಆಟ ಕೊನೆಗಾಣಿಸಲು ಬಂಗಾಳದ ಜನರು ನಿರ್ಧರಿಸಿದ್ದಾರೆ ಎಂದರು.

ದಶಕಗಳಿಂದ ಕಾಯುತ್ತಿದ್ದ ಬಂಗಾಳದ ಜನರು ಹೊಸ ಪರಿವರ್ತನೆ ಕಾಣಲಿದ್ದಾರೆ. ಈ ಚುನಾವಣೆಯನ್ನು ಬಿಜೆಪಿ ಎದುರಿಸುತ್ತಿಲ್ಲ, ಬದಲಿಗೆ ಬಂಗಾಳದ ಜನರು ಎದುರಿಸುತ್ತಿದ್ದಾರೆ. ಕೇಂದ್ರೀಯ ಪಡೆಗಳು ನಿಷ್ಪಕ್ಷಪಾತ ರೀತಿಯಲ್ಲಿ ದೇಶಾದ್ಯಂತ ಮತದಾನಕ್ಕಾಗಿ ಕಾರ್ಯ ನಿರ್ವಹಿಸುತ್ತಿವೆ. ಸಮಸ್ಯೆ ಎದುರಾಗಿರುವುದು ಪಡೆಗಳಿಂದಲ್ಲ. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಹಿಂಸಾಚಾರಗಳಿಂದಷ್ಟೇ. ಹತಾಶರಾಗಿರುವ ಮಮತಾ ಬ್ಯಾನರ್ಜಿ ಕೇಂದ್ರೀಯ ಪಡೆಗಳನ್ನು ದೂಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ಪಶ್ಚಿಮ ಬಂಗಾಳವು ಶೀಘ್ರದಲ್ಲೇ ತೋಲಾಬಾಜಿ ಸಂಸ್ಕೃತಿಯನ್ನು ತೊಡೆದುಹಾಕಲಿದೆ. ಪಶ್ಚಿಮ ಬಂಗಾಳದಿಂದ ಸೈದ್ಧಾಂತಿಕ ಶಕ್ತಿಯನ್ನು ಪಡೆಯುತ್ತಿರುವ ದೇಶದ ಏಕೈಕ ಪಕ್ಷ ಬಿಜೆಪಿ. ಮೇ 2 ರಿಂದ ನಿಜವಾದ ಬದಲಾವಣೆಯ ಮಹಾಯಾಗ ಬಂಗಾಳದಲ್ಲಿ ಪ್ರಾರಂಭವಾಗಲಿದೆ. ಈ ಮಹಾಯಾಗ ಸುಲಿಗೆ ಮಾಡುವವರಿಗೆ ಮತ್ತು ನಿರ್ಲಕ್ಷಿಸುವವರಿಗೆ ಪಾಠ ಕಲಿಸುತ್ತದೆ ಎಂದು ಮೋದಿ, ದೀದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

SCROLL FOR NEXT