ದೇಶ

ಪಶ್ಚಿಮ ಬಂಗಾಳದಲ್ಲಿ 4ನೇ ಹಂತದ ಮತದಾನ: ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಸೇರಿ ಪ್ರಮುಖರು ಕಣದಲ್ಲಿ

Sumana Upadhyaya

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಕ್ಷೇತ್ರಗಳ 5 ಜಿಲ್ಲೆಗಳ 44 ಕ್ಷೇತ್ರಗಳಿಗೆ ನಾಲ್ಕನೇ ಹಂತದ ಮತದಾನ ಶನಿವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ.

ಇಂದು ಹೌರಾ, ಹೂಗ್ಲಿ, ದಕ್ಷಿಣ 24 ಪರ್ಗಾನ, ಅಲಿಪುರ್ದೌರ್ ಮತ್ತು ಕೂಚ್ ಬೆಹರ್ ಗಳಲ್ಲಿ ಮತದಾನ ನಡೆಯುತ್ತಿದೆ. ಅತಿ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದು ಟೊಲ್ಲಿಗುಂಗೆ ಕ್ಷೇತ್ರವಾಗಿದ್ದು, ಇಲ್ಲಿ ಬಿಜೆಪಿಯ ಕೇಂದ್ರ ಸಚಿವ ಬಬುಲ್ ಸುಪ್ರಿಯೊ ಅವರನ್ನು ಟಿಎಂಸಿ ಶಾಸಕ ಅರೂಪ್ ಬಿಸ್ವಾಸ್ ವಿರುದ್ಧ ನಿಲ್ಲಿಸಲಾಗಿದೆ.

ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಬಿಸ್ವಾಸ್ ಸಚಿವರು ಕೂಡ ಆಗಿದ್ದಾರೆ, ಸಮಾಜವಾದಿ ಸಂಸದೆ ಜಯಾ ಬಚ್ಚನ್ ಟಿಎಂಸಿ ಅಭ್ಯರ್ಥಿ ಅರೂಪ್ ಬಿಸ್ವಾಸ್ ಪರ ಮತಯಾಚನೆ ಮಾಡಿದ್ದಾರೆ. ಸಿಪಿಎಂನಿಂದ ಡೆಬ್ಟಟ್ ಘೋಷ್ ಚುನಾವಣಾ ಕಣಕ್ಕಿಳಿದಿದ್ದಾರೆ.

ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು: ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ತೃಣಮೂಲ ಕಾಂಗ್ರೆಸ್ ಸಿಟಲ್ಕುಚಿ, ನಟಲ್ಬರಿ, ಟುಫಂಗಂಜ್ ಮತ್ತು ದಿನ್ಹಟಗಳಲ್ಲಿ ಬಿಜೆಪಿಯ ಗೂಂಡಾಗಳು ಮತಗಟ್ಟೆಯ ಹೊರಗೆ ದಾಂಧಲೆ ಎಬ್ಬಿಸಿದ್ದು, ಮತಗಟ್ಟೆಯ ಒಳಗೆ ಹೋಗಲು ಟಿಎಂಸಿ ಏಜೆಂಟ್ ಗಳಿಗೆ ತಡೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮತದಾನ ಕೇಂದ್ರಗಳ ಹೊರಗೆ ಮತದಾರರ ಉದ್ದ ಸರತಿ ಸಾಲುಗಳು ಕಂಡುಬರುತ್ತಿದ್ದು, ಸಂಜೆ 6.30 ರವರೆಗೆ ಮತದಾನ ಮುಂದುವರಿಯುತ್ತದೆ. ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಮತ್ತು ರಾಜ್ಯ ಸಚಿವರಾದ ಪಾರ್ಥ ಚಟರ್ಜಿ ಮತ್ತು ಅರೂಪ್ ಬಿಸ್ವಾಸ್ ಸೇರಿದಂತೆ 373 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು 1.15 ಕೋಟಿ ಮತದಾರರು ಇಂದು ಮತ ಚಲಾಯಿಸುತ್ತಿದ್ದಾರೆ.

ಶಾಂತಿಯುತ ಮತದಾನ ಸಾಗಲು ಬಿಗಿಯಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) 789 ತುಕಡಿಗಳನ್ನು 15,940 ಮತದಾನ ಕೇಂದ್ರಗಳಿಗೆ ಕಾವಲಿಗೆ ನಿಯೋಜಿಸಲಾಗಿದೆ. ಈ ಹಿಂದಿನ ಮೂರು ಹಂತಗಳ ಮತದಾನ ವೇಳೆ ರಾಜ್ಯಜಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಅವರ ಮೇಲೆ ನಡೆದ ದಾಳಿ ಸೇರಿದಂತೆ ಅನೇಕ ಹಿಂಸಾಚಾರಗಳು ನಡೆದಿವೆ.

ಕೇಂದ್ರ ಪಡೆಗಳಿಗೆ ನೆರವಾಗಲು ರಾಜ್ಯ ಪೊಲೀಸ್ ಪಡೆಗಳನ್ನು ಕಾರ್ಯತಂತ್ರದ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಪಶ್ಚಿಮ ಬಂಗಾಳದ 294 ವಿಧಾನಸಭಾ ಸ್ಥಾನಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮೇ 2 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ: ನಾಲ್ಕನೇ ಹಂತದ ಮತದಾನದಲ್ಲಿ ಪಶ್ಚಿಮ ಬಂಗಾಳದಲ್ಲಿ ಇಂದು ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ದಾಖಲೆಯ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ. 

SCROLL FOR NEXT