ದೇಶ

ಕೋವಿಡ್ ಎರಡನೇ ಅಲೆ: ದೇಶಾದ್ಯಂತ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ; ಆಕ್ಸಿಜನ್, ರಿಮೆಡೆಸಿವಿರ್ ಪೂರೈಕೆ ಸಮಸ್ಯೆ

Sumana Upadhyaya

ಮುಂಬೈ/ಭೋಪಾಲ್/ಲಕ್ನೊ/ರಾಯ್ಪುರ:  ಗುಜರಾತ್ ನ ಅಹಮದಾಬಾದ್ ನ ಕೋವಿಡ್-19 ಆಸ್ಪತ್ರೆಯ ಹೊರಗೆ ಆಂಬ್ಯುಲೆನ್ಸ್ ಗಳ ಸಾಲುಗಳು ರೋಗಿಗಳನ್ನು ಹೊತ್ತು ನಿಂತಿದ್ದು, ಸೂರತ್ ನ ಜಹಗಿರ್ಪುರ ಚಿತಾಗಾರ ಹೊರಗೆ ಕೋವಿಡ್ ಸೌಲಭ್ಯ ಇರುವ ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದು ಆ ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟಿಕೊಡುತ್ತದೆ.

ಗುಜರಾತ್ ರಾಜ್ಯದಲ್ಲಿ ಹೊಸದಾಗಿ 6 ಸಾವಿರದ 690 ಕೊರೋನಾ ಕೇಸುಗಳು ಮತ್ತು 67 ಸಾವು ಪ್ರಕರಣಗಳು ವರದಿಯಾಗಿದ್ದು ಕೊರೋನಾ ತಾಂಡವವಾಡುತ್ತಿದೆ. ಸೂರತ್ ನಲ್ಲಿ ಅತಿ ಹೆಚ್ಚು ಕೊರೋನಾ ಕೇಸು ದಾಖಲಾಗಿದೆ.

ಕಳೆದ ಬುಧವಾರ ಗುಜರಾತ್ ರಾಜ್ಯ ಆರೋಗ್ಯ ಇಲಾಖೆಯ ವರದಿ ಪ್ರಕಾರ 22 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ ಎಂದು ಹೇಳಿದರೆ ಸ್ಥಳೀಯ ಅಧಿಕಾರಿಗಳು ಮತ್ತು ಮೂಲಗಳು ಹೇಳುವ ಪ್ರಕಾರ ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ.

ಭಾರತದಲ್ಲಿ ಕೊರೋನಾ ಪ್ರಕರಣದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ನಿನ್ನೆ ಒಂದೇ ದಿನ 60 ಸಾವಿರದ 212 ಹೊಸ ಕೇಸುಗಳು ವರದಿಯಾಗಿದ್ದು 281 ಸಾವು ಸಂಭವಿಸಿದೆ. ಹೀಗಾಗಿ ಅಲ್ಲಿ ರಾತ್ರಿ 8 ಗಂಟೆಗೆ ಜನತಾ ಕರ್ಫ್ಯೂ ಹೇರಲಾಗಿದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸರ್ಕಾರಿ ಅಧಿಕಾರಿಗಳಿಗೆ ಕೋವಿಡ್-19 ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲು, ಆಕ್ಸಿಜನ್ ಹೆಚ್ಚೆಚ್ಚು ಉತ್ಪಾದನೆಗೆ ಮತ್ತು ವೈರಸ್ ನ ಕೊಂಡಿಯನ್ನು ಮುರಿಯಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆಲ್ಲಾ ಚಟುವಟಿಕೆಗಳು ಮೇ 1ರವರೆಗೆ ಮುಚ್ಚಲಿವೆ.

ಮಧ್ಯ ಪ್ರದೇಶದಲ್ಲಿ 8 ಸಾವಿರದ 998 ಹೊಸ ಕೊರೋನಾ ಕೇಸುಗಳು ವರದಿಯಾಗಿದ್ದು ರಾಜ್ಯದ 52 ಜಿಲ್ಲೆಗಳಲ್ಲಿ 28 ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣಗಳು ವಿಪರೀತವಾಗಿದೆ. ಈಗಾಗಲೇ 31 ಸಾವಿರ ವೈಯಲ್ಸ್ ನ್ನು ಸಂಗ್ರಹ ಮಾಡಿದ್ದು 12 ಸಾವಿರ ವೈಯಲ್ಸ್ ಗಳು ಇನ್ನಷ್ಟು ಬರಲಿರುವುದರಿಂದ ರೆಮ್ಡೆಸಿವಿರ್ ಪರಿಸ್ಥಿತಿಗೆ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಕೂಡ ಪರಿಸ್ಥಿತಿ ನಿಯಂತ್ರಣ ಮೀರಿ ಹೋಗುತ್ತಿದೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ 17 ಸಾವಿರದ 963 ಹೊಸ ಕೇಸುಗಳು ಪತ್ತೆಯಾಗಿದೆ. ಲಕ್ನೊ, ಪ್ರಯಾಗ್ ರಾಜ್, ವಾರಣಾಸಿ ಮತ್ತು ಕಾನ್ಪುರ ನಗರಗಳಲ್ಲಿ ಶೇಕಡಾ 45ಕ್ಕಿಂತ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗಿವೆ.

ಛತ್ತೀಸ್ ಗಢ ದೇಶದಲ್ಲಿ ಕೊರೋನಾ ಸೋಂಕಿತರ ವಿಷಯದಲ್ಲಿ ಮೂರನೇ ಸ್ಥಾನದಲ್ಲಿದ್ದು 15 ಸಾವಿರದ 121 ಹೊಸ ಕೇಸುಗಳು ವರದಿಯಾಗಿವೆ. ರಾಜಸ್ತಾನ ಸರ್ಕಾರ 10 ಮತ್ತು 12ನೇ ತರಗತಿಗಳ ಪರೀಕ್ಷೆಯನ್ನು ರದ್ದುಪಡಿಸಿದೆ. 

SCROLL FOR NEXT