ದೇಶ

ದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿ, ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

Sumana Upadhyaya

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಈಗ ಕೊರೋನಾ ನಾಲ್ಕನೇ ಅಲೆ ಎದ್ದು ತೀವ್ರವಾಗುತ್ತಿದೆ. ಈ ನಿಟ್ಟಿನಲ್ಲಿ ಸೋಂಕಿಗೆ ನಿಯಂತ್ರಣ ಹಾಕಲು ಶತಾಯಗತಾಯ ಪ್ರಯತ್ನಿಸುತ್ತಿರುವ ದೆಹಲಿ ಸರ್ಕಾರ ವಾರಾಂತ್ಯ ಕರ್ಫ್ಯೂ ಹೇರುತ್ತಿದೆ.

ಈ ಬಗ್ಗೆ ವಿಡಿಯೊ ಸಂದೇಶದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಈ ನಿರ್ಬಂಧ ಜನರ ಒಳ್ಳೆಯದಕ್ಕೆ. ಜನರಿಗೆ ಇದರಿಂದ ಕಷ್ಟವಾಗಬಹುದು ಆದರೆ ಈ ನಿರ್ಬಂಧ ಹೇರಿಕೆ ಕೊರೋನಾ ಹರಡುವಿಕೆಯ ಕೊಂಡಿಯನ್ನು ಮುರಿಯಲು ಅಗತ್ಯವಾಗಿದೆ ಎಂದರು.

ದೆಹಲಿ ಸರ್ಕಾರದ ಹೊಸ ನಿರ್ಬಂಧ ಪ್ರಕಾರ, ಮಾಲ್ ಗಳು, ಜಿಮ್ ಗಳು, ಸ್ಪಾ, ಆಡಿಟೋರಿಯಂಗಳು ವಾರಾಂತ್ಯದಲ್ಲಿ ಮುಚ್ಚಲಿವೆ. ಹೊಟೇಲ್ ಗಳು ಮತ್ತು ರೆಸ್ಟೋರೆಂಟ್ ಗಳಲ್ಲಿ ಡೈನ್ ಇನ್ ಸೇವೆಗಳಿಗೆ ನಿರ್ಬಂಧವಿರುತ್ತದೆ. ಹೊಟೇಲ್ ಗಳಿಂದ ಮನೆಗಳಿಗೆ ಆಹಾರ ಪದಾರ್ಥಗಳನ್ನು ಪಾರ್ಸೆಲ್ ತೆಗೆದುಕೊಂಡು ಜನರು ಹೋಗಬೇಕಾಗುತ್ತದೆ.

ಅಗತ್ಯ ಸೇವೆಗಳನ್ನು ನೀಡುವವರಿಗೆ ಕರ್ಫ್ಯೂ ಪಾಸ್ ಗಳನ್ನು ನೀಡಲಾಗುತ್ತದೆ. ಇಂದು ಘೋಷಣೆಯಾಗಿರುವ ನಿರ್ಬಂಧಗಳು ಕೊರೋನಾ ವೈರಸ್ ತಡೆಗಟ್ಟುವಿಕೆಗೆ ಅತ್ಯಗತ್ಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ನೈಟ್ ಕರ್ಫ್ಯೂ ಜೊತೆಗೆ ವಾರಾಂತ್ಯ ಕರ್ಫ್ಯೂ ಏಪ್ರಿಲ್ 30ರವರೆಗೆ ಜಾರಿಯಲ್ಲಿರುತ್ತದೆ. ದೆಹಲಿ ಸರ್ಕಾರ ಕಳೆದ ವಾರ ನೈಟ್ ಕರ್ಫ್ಯೂ ಘೋಷಿಸಿತ್ತು.

ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ದೆಹಲಿಯ ಆಸ್ಪತ್ರೆಗಳಲ್ಲಿ ಬೆಡ್ ಗಳಿಗೆ ಕೊರತೆಯುಂಟಾಗಿದೆ ಎಂಬ ಮಾತುಗಳ ಮಧ್ಯೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ, 5 ಸಾವಿರಕ್ಕೂ ಹೆಚ್ಚು ಬೆಡ್ ಗಳ ಲಭ್ಯವಿದ್ದು ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆಯಿಲ್ಲ ಎಂದರು.

ಮಹಾರಾಷ್ಟ್ರ, ತಮಿಳು ನಾಡು, ಕೇರಳಗಳಲ್ಲಿ ವಾರಾಂತ್ಯ ಲಾಕ್ ಡೌನ್ ಮತ್ತು ನೈಟ್ ಕರ್ಫ್ಯೂ ಜಾರಿಯಲ್ಲಿದೆ.

ಇಂದು ಭಾರತದಲ್ಲಿ 2 ಲಕ್ಷಕ್ಕೂ ಅಧಿಕ ಮಂದಿಗೆ ಕೊರೋನಾ ಕಾಣಿಸಿಕೊಂಡು ಒಟ್ಟು ಸೋಂಕಿತರ ಸಂಖ್ಯೆ 1 ಕೋಟಿಯ 40 ಲಕ್ಷದ 74 ಸಾವಿರದ 564ಕ್ಕೆ ಏರಿಕೆಯಾಗಿದೆ. ಸಕ್ರಿಯ ಕೇಸುಗಳ ಸಂಖ್ಯೆ 14 ಲಕ್ಷಕ್ಕೂ ಅಧಿಕವಾಗಿದೆ.

SCROLL FOR NEXT