ದೇಶ

ಕೋವಿಡ್ ಸೋಂಕಿತರ ಹೆಚ್ಚಳ: ಸಾರ್ವಜನಿಕ ರ‍್ಯಾಲಿಗಳ ರದ್ದು ಮಾಡಿದ ರಾಹುಲ್ ಗಾಂಧಿ 

Srinivasamurthy VN

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಅಂತಿಮ ಹಂತದ ಮತದಾನಗಳಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಸಾರ್ವಜನಿಕ ರ‍್ಯಾಲಿಗಳನ್ನು ರದ್ದು ಮಾಡಿದ್ದಾರೆ.

ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಬಂಗಾಳದಲ್ಲಿ ಕೊವಿಡ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ನನ್ನ ಎಲ್ಲ ಸಾರ್ವಜನಿಕ ರ‍್ಯಾಲಿಗಳನ್ನು ರದ್ದು ಮಾಡುತ್ತಿದ್ದೇನೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಬೃಹತ್ ರ‍್ಯಾಲಿಗಳನ್ನು ಆಯೋಜಿಸಿದಾಗ ಉಂಟಾಗುವ ಪರಿಣಾಮದ ಬಗ್ಗೆ ಎಲ್ಲ  ರಾಜಕೀಯ ನಾಯಕರು ಗಂಭೀರವಾಗಿ ಚಿಂತಿಸಬೇಕು ಎಂದು ಹೇಳಿದ್ದಾರೆ.

8 ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ಮತ್ತೆ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಮೊದಲ 5 ಹಂತದ ಚುನಾವಣೆ ವೇಳೆ ಬಿಜೆಪಿ, ಟಿಎಂಸಿ ಸೇರಿದಂತೆ ಎಲ್ಲ ಪಕ್ಷಗಳು ಆರೋಗ್ಯ ಸಚಿವಾಲಯದ ಆದೇಶಿಸಿದ್ದ ಕೊವಿಡ್ ಮಾರ್ಗಸೂಚಿಗಳನ್ನು  ಉಲ್ಲಂಘಿಸಿ ಚುನಾವಣಾ ಪ್ರಚಾರ ನಡೆಸಿವೆ. ರಾಜಕೀಯ ಪಕ್ಷಗಳು ಬೃಹತ್ ರ‍್ಯಾಲಿ ಮತ್ತು ರೋಡ್ ಶೋಗಳನ್ನು ಆಯೋಜಿಸಿ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿವೆ. ಹೀಗಾಗಿ ಇಲ್ಲಿ ಸೋಂಕಿತರ ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ.

ಅಂತೆಯೇ ದೇಶದಲ್ಲಿ ಕೊವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನುಳಿದ ಹಂತದ ಚುನಾವಣೆಗಾಗಿ ನಡೆಸುವ ಪ್ರಚಾರ ಕಾರ್ಯಕ್ರಮದ ಅವಧಿಗೆ ಚುನಾವಣಾ ಆಯೋಗ ಕತ್ತರಿ ಹಾಕಿದೆ. ಪ್ರತಿಯೊಂದು ಹಂತದ ಚುನಾವಣೆಯ ಪ್ರಚಾರ ಕಾರ್ಯಕ್ರಮಕ್ಕೆ 48 ಗಂಟೆಗಳ ಮೌನ ಅವಧಿಯನ್ನು 72 ಗಂಟೆಗಳಿಗೆ  ವಿಸ್ತರಿಸಿ ಚುನಾವಣೆ ಆಯೋಗ ಆದೇಶ ಹೊರಡಿಸಿದೆ. ಸ್ಟಾರ್ ಪ್ರಚಾರಕರು, ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳು ಚುನಾವಣಾ ಪ್ರಚಾರದ ಮೇಳೆ ಕೊವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಮೂಲಕ ಕೊರೊನಾ ಸೋಂಕಿನ ಅಪಾಯವನ್ನು ಸ್ವಯಂ ಆಹ್ವಾನಿಸುವುದಲ್ಲದೆ ಇತರರಿಗೂ ಸೋಂಕು ಹರಡಲು  ಕಾರಣವಾಗುತ್ತಿದ್ದಾರೆ ಎಂದು ಚುನಾವಣಾ ಆಯೋಗ ಗರಂ ಆಗಿತ್ತು. 

ಹೀಗಾಗಿ ಸಂಜೆ 7ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೆ ಯಾವುದೇ ರ‍್ಯಾಲಿ, ಸಾರ್ವಜನಿಕ ಸಭೆ, ಬೀದಿ ನಾಟಕ, ಬೀದಿಸಭೆಗಳಿಗೆ ಅನುಮತಿ ಇರುವುದಿಲ್ಲ ಎಂದು ಚುನಾವಣಾ ಆಯೋಗ ಆದೇಶಿಸಿದ್ದು, ಶುಕ್ರವಾರ ಸಂಜೆ 7ಗಂಟೆಯಿಂದಲೇ ಈ ಆದೇಶ ಜಾರಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆಲಿರುವ 6,7  ಮತ್ತು 8ನೇ ಹಂತದ ಚುನಾವಣೆಗಾಗಿ ನಡೆಸುವ ರ‍್ಯಾಲಿ, ಸಾರ್ವಜನಿಕ ಸಭೆ, ಬೀದಿ ನಾಟಕ, ಬೀದಿ ಸಭೆ, ಬೈಕ್ ರ‍್ಯಾಲಿ ಅಥವಾ ಚುನಾವಣಾ ಪ್ರಚಾರಕ್ಕಾಗಿ ಗುಂಪು ಸೇರುವಿಕೆಯ ಮೌನ ಅವಧಿಯನ್ನು (Silence period) 72 ಗಂಟೆಗಳವರೆಗೆ ವಿಸ್ತರಿಸಲಾಗಿದೆ.
 

SCROLL FOR NEXT