ದೇಶ

ಕೇಂದ್ರದ ಕೊರೋನಾ ಲಸಿಕೆ ನೀತಿ ಟೊಳ್ಳು: ಪ್ರಧಾನಿ ಮೋದಿಗೆ ಪತ್ರ ಬರೆದ ಮಮತಾ ಬ್ಯಾನರ್ಜಿ

Lingaraj Badiger

ನವದೆಹಲಿ: ಕೇಂದ್ರ ಸರ್ಕಾರದ ಹೊಸ ಲಸಿಕೆ ನೀತಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಇದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ವಾಸ್ತವಾಂಶ ಇಲ್ಲದ ಟೊಳ್ಳು ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಮಮತಾ ಬ್ಯಾನರ್ಜಿ, "ಕೇಂದ್ರ ಸರ್ಕಾರವು 2021ರ ಏಪ್ರಿಲ್ 19 ರಂದು ಹೆಚ್ಚು ವಿಳಂಬವಾದ ಸಾರ್ವತ್ರಿಕ ಲಸಿಕೆ ನೀತಿಯನ್ನು ಘೋಷಿಸಿದೆ ಎಂಬ ಬಗ್ಗೆ ನನಗೆ ಮಾಹಿತಿ ಬಂತು. ಇದು ಟೊಳ್ಳಾಗಿ ಕಾಣುತ್ತದೆ, ವಸ್ತವಾಂಶ ಇಲ್ಲದ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿರುವುದು ವಿಷಾದನೀಯ" ಎಂದು ಉಲ್ಲೇಖಿಸಿದ್ದಾರೆ.

ಇದಕ್ಕು ಮುನ್ನ ಫೆಬ್ರವರಿ 24, 2021ರಂದು ಪ್ರಧಾನಿಗೆ ಬರೆದ ಪತ್ರದಲ್ಲಿ, ಪಶ್ಚಿಮ ಬಂಗಾಳ ಲಸಿಕೆಗಳನ್ನು ನೇರವಾಗಿ ತನ್ನ ಸಂಪನ್ಮೂಲಗಳೊಂದಿಗೆ ಖರೀದಿಸಲು ಅವಕಾಶ ನೀಡುವಂತೆ ಮತ್ತು ರಾಜ್ಯದ ಜನರಿಗೆ ಉಚಿತ ಲಸಿಕೆ ನೀಡುವಂತೆ ಕೋರಿರುವುದನ್ನು ದೀದಿ ನೆನಪಿಸಿದ್ದಾರೆ.

ಈ ಹಿಂದೆ ಬರೆದ ಪತ್ರಕ್ಕೆ ನಿಮ್ಮ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈಗ ಕೋವಿಡ್ ಎರಡನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೇಂದ್ರ ಖಾಲಿ ವಾಕ್ಚಾತುರ್ಯದಲ್ಲಿ ಪಾಲ್ಗೊಳ್ಳುವ ಮೂಲಕ  ದೇಶದ ಜನರಿಗೆ ಲಸಿಕೆ ಲಭ್ಯವಾಗಿಸುವ ಜವಾಬ್ದಾರಿಯಿಂದ ದೂರ ಸರಿಯುತ್ತದೆ” ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ ನಿನ್ನೆಯಷ್ಟೇ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವಂತೆ ಆದೇಶಿಸಿದ್ದು, ರಾಜ್ಯಗಳು, ಖಾಸಗಿ ಆಸ್ಪತ್ರೆಗಳು ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ನೇರವಾಗಿ ಉತ್ಪಾದಕರಿಂದ ಲಸಿಕೆ ಖರೀದಿಸಿ ಸಂಗ್ರಹಿಸಲು ಅನುವು ಮಾಡಿಕೊಟ್ಚಿದೆ.

SCROLL FOR NEXT