ದೇಶ

ಕೋವಿಡ್-19 ಉಲ್ಬಣ: ಭಾರತವನ್ನು 'ಕೆಂಪು ಪಟ್ಟಿ'ಗೆ ಸೇರಿಸಿದ ಬ್ರಿಟನ್; ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ!

Srinivasamurthy VN

ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಬ್ರಿಟನ್ ಸರ್ಕಾರ ಭಾರತವನ್ನು ಕೆಂಪುಪಟ್ಟಿಗೆ ಸೇರಿಸಿದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆ ಬ್ರಿಟನ್ ಗೆ ವಿಮಾನ ಯಾನ ಸೇವೆ ಸ್ಥಗಿತಗೊಳಿಸಿದೆ.

ಮೂಲಗಳ ಪ್ರಕಾರ ಏರ್ ಇಂಡಿಯಾ ಏಪ್ರಿಲ್ 24 ರಿಂದ 30 ರವರೆಗೆ ಬ್ರಿಟನ್ ತೆರಳಬೇಕಿದ್ದ ತನ್ನ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ. 

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ, ಬ್ರಿಟನ್ ಸರ್ಕಾರ ಹೇರಿರುವ ಇತ್ತೀಚೆಗಿನ ನಿರ್ಬಂಧಗಳಿಂದಾಗಿ ಏಪ್ರಿಲ್ 24ರಿಂದ 30ರವರೆಗೆ ಪ್ರಯಾಣಿಸಬೇಕಾಗಿದ್ದ ಪ್ರಯಾಣಿಕರಿಗೆ ವಿಮಾನ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಅವಧಿಯಲ್ಲಿ ಬ್ರಿಟನ್ ತೆರಳಬೇಕಿದ್ದ ಎಲ್ಲ ವಿಮಾನಗಳನ್ನು  ರದ್ದು ಮಾಡಲಾಗಿದೆ ಎಂದು ಹೇಳಿದೆ.

ಮುಂದಿನ ದಿನಗಳಲ್ಲಿ ವಿಮಾನ ಪ್ರಯಾಣದ ಮರುಹೊಂದಿಸುವಿಕೆ ಅಥವಾ ಟಿಕೆಟ್ ಹಣ ಮರುಪಾವತಿ ಕುರಿತ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ ಎಂದು ಹೇಳಿದೆ. 

"ಏಪ್ರಿಲ್ 24 ರಿಂದ ಏಪ್ರಿಲ್ 30 ರ ನಡುವೆ, ದೆಹಲಿ ಮತ್ತು ಮುಂಬೈಯಿಂದ ಬ್ರಿಟನ್ ಗೆ ವಾರಕ್ಕೊಮ್ಮೆ ವಿಮಾನ ಹಾರಾಟವನ್ನು ನಿಗದಿಪಡಿಸುವ ಪ್ರಕ್ರಿಯೆಯಲ್ಲಿದ್ದೇವೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಏರ್ ಇಂಡಿಯಾದ ಸಾಮಾಜಿಕ ಮಾಧ್ಯಮ ಚಾನೆಲ್‌ಗಳ ವೆಬ್‌ಸೈಟ್‌ನಲ್ಲಿಯೂ ನವೀಕರಿಸಲಾಗುವುದು  ಎಂದು ಹೇಳಿದೆ.

ಭಾರತದಲ್ಲಿ ಪತ್ತೆಯಾದ ರೂಪಾಂತರಿ ಕೊರೋನಾ ವೈರಸ್ 103 ಸೋಂಕು ಪ್ರಕರಣಗಳು ಬ್ರಿಟನ್ ನಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಬ್ರಿಟನ್ ಸರ್ಕಾರ ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಿತ್ತು. ಈ ಕುರಿತು ಸ್ಪಷ್ಟನೆ ನೀಡಿದ್ದ ಬ್ರಿಟನ್ ರಾಯಭಾರ ಕಚೇರಿ ರೂಪಾಂತರಿ ವೈರಸ್ ಸೋಂಕು ಹರಡುವುದನ್ನು ತಡೆಯಲು  ಮತ್ತು ಹೆಚ್ಚು ದುರ್ಬಲರನ್ನು ರಕ್ಷಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿತ್ತು.
 

SCROLL FOR NEXT