ದೇಶ

ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ದೊಡ್ಡ ದುರಂತ ಸಂಭವ: ಪ್ರಧಾನಿ ನೇತೃತ್ವದ ಕೋವಿಡ್ ಸಭೆಯಲ್ಲಿ ಕೇಜ್ರಿವಾಲ್ 

Nagaraja AB

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ದೊಡ್ಡ ದುರಂತ ಸಂಭವಿಸುವ ಸಾಧ್ಯತೆಯಿದ್ದು, ಸೇನೆ ಮೂಲಕ ಎಲ್ಲಾ ಆಕ್ಸಿಜನ್ ಪ್ಲಾಂಟ್ ಗಳನ್ನು ಕೇಂದ್ರ ಸರ್ಕಾರ ತನ್ನ ವಶಕ್ಕೆ ಪಡೆದುಕೊಳ್ಳಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

ಕೋವಿಡ್ ಪರಿಸ್ಥಿತಿ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆಯಲ್ಲಿ ರಾಷ್ಟ್ರ ರಾಜಧಾನಿಗೆ ಬರುವ ಅಕ್ಸಿಜನ್ ಟ್ಯಾಂಕರ್ ಗಳ  ಸುಲಭ ಸಾಗಟಕ್ಕೆ ಅನುವು ಮಾಡಿಕೊಡುವಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ನಿರ್ದೇಶಿಸಬೇಕೆಂದು ಕೇಜ್ರಿವಾಲ್ ಮನವಿ ಮಾಡಿದರು.

ಅಕ್ಸಿಜನ್ ಕೊರತೆಯಿಂದ ಜನತೆ ದೊಡ್ಡ ನೋವು ಅನುಭವಿಸುತ್ತಿದ್ದಾರೆ. ಆಕ್ಸಿಜನ್ ಕೊರತೆಯಿಂದ ದೊಡ್ಡ ದುರಂತ ಸಂಭವಿಸುವ ಭೀತಿಯಲ್ಲಿದ್ದೇವೆ. ನಮ್ಮನ್ನು ಎಂದಿಗೂ ಕ್ಷಮಿಸಲು ನಮಗೆ ಸಾಧ್ಯವಾಗುವುದಿಲ್ಲ. ದೆಹಲಿಗೆ ಬರುವ ಆಕ್ಸಿಜನ್ ಟ್ಯಾಂಕರ್ ಗಳ ಸುಲಭ ಸಾಗಟಕ್ಕೆ ಅನುವು ಮಾಡಿಕೊಡುವಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ನಿರ್ದೇಶಿಸಬೇಕೆಂದು ತಮ್ಮಲ್ಲಿ ಕೈ ಮುಗಿದು ಮನವಿ ಮಾಡಿಕೊಳ್ಳುವುದಾಗಿ ಕೇಜ್ರಿವಾಲ್ ಸಭೆಯಲ್ಲಿ ಹೇಳಿದರು.

ಈ ಬಿಕ್ಕಟ್ಟು ಪರಿಹರಿಸಲು ರಾಷ್ಟ್ರೀಯ ಯೋಜನೆಯ ಅಗತ್ಯವಿದೆ. ಸೇನೆಯ ಮೂಲಕ ಎಲ್ಲಾ ಆಕ್ಸಿಜನ್ ಘಟಕಗಳನ್ನು ಕೇಂದ್ರ ಸರ್ಕಾರ ತನ್ನ ವಶಕ್ಕೆ ಪಡೆಯಬೇಕು, ಎಲ್ಲಾ ಆಕ್ಸಿಜನ್ ಟ್ಯಾಂಕರ್ ಗಳು ಸೇನೆಯ ಎಸ್ಕಾರ್ಟ್ ವಾಹನದೊಂದಿಗೆ ಆಕ್ಸಿಜನ್ ಘಟಕದಿಂದ ಹೊರಗೆ ಬರಬೇಕು. ಒಡಿಶಾ ಮತ್ತು ಪಶ್ಚಿಮ ಬಂಗಾಳದಿಂದ ದೆಹಲಿಗೆ  ಆಮ್ಲಜನಕವನ್ನು ವಿಮಾನದಿಂದ ಸಾಗಿಸಬೇಕು ಅಥವಾ ಕೇಂದ್ರವು ಪ್ರಾರಂಭಿಸಿದ ಆಕ್ಸಿಜನ್ ಎಕ್ಸ್‌ಪ್ರೆಸ್ ಮೂಲಕ ತರಬೇಕು ಎಂದು ಹೇಳಿದರು.

ಕೋವಿಡ್- ಲಸಿಕೆಗಾಗಿ ಕೇಂದ್ರ ಸರ್ಕಾರ ಹಾಗೂ  ರಾಜ್ಯ ಸರ್ಕಾರಗಳು ವಿವಿಧ ದರಗಳನ್ನು ವಿಧಿಸುವುದನ್ನು ಆಕ್ಷೇಪಿಸಿದ ಕೇಜ್ರಿವಾಲ್, ಒಂದು ರಾಷ್ಟ್ರ, ಒಂದು ದರ" ನೀತಿಯನ್ನು ಅನುಸರಿಸಬೇಕು ಎಂದು ಹೇಳಿದರು.
ಅತ್ಯಂತ ಹೆಚ್ಚಿನ  ಕೋವಿಡ್-19 ಪ್ರಕರಣಗಳು ಕಂಡುಬಂದಿರುವ 10 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಸಭೆ ನಡೆಸಿ, ಚರ್ಚಿಸಿದರು. 

SCROLL FOR NEXT