ದೇಶ

ಭ್ರಷ್ಟಾಚಾರ ಪ್ರಕರಣ; 'ಮಹಾ' ಮಾಜಿ ಸಚಿವ ಅನಿಲ್ ದೇಶ್`ಮುಖ್ ವಿರುದ್ಧ ಎಫ್ ಐಆರ್ ದಾಖಲು, ಮನೆಗಳ ಮೇಲೆ ಸಿಬಿಐ ದಾಳಿ

Srinivasamurthy VN

ಮುಂಬೈ: ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್`ಮುಖ್ ವಿರುದ್ಧ ಸಿಬಿಐ ಎಫ್ ಐರ್ ದಾಖಲಿಸಿಕೊಂಡಿದ್ದು, ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.

ಲಂಚ ಪ್ರಕರಣದಲ್ಲಿ ಮುಂಬೈನ ಐಪಿಎಸ್ ಅಧಿಕಾರಿ ಪರಮ್ ಬಿರ್ ಸಿಂಗ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಮತ್ತು ಇತರರ ವಿರುದ್ಧ ಸಿಬಿಐ ಶನಿವಾರ ಎಫ್ಐಆರ್ ದಾಖಲಿಸಿದೆ. ಅಲ್ಲದೆ ಇಂದು ಅವರ ನಿವಾಸಗಳ ಮೇಲೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆ ಪತ್ರಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿ ತಿಂಗಳೂ 100 ಕೋಟಿ ರೂ. ಲಂಚ ಸಂಗ್ರಹಿಸುವಂತೆ ಅಮಾನತುಗೊಂಡಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಅನಿಲ್ ದೇಶಮುಖ್ ಸೂಚಿಸಿದ್ದರು ಎಂದು ಐಪಿಎಸ್ ಅಧಿಕಾರಿ ಪರಮ್ ವೀರ್ ಸಿಂಗ್ ಆರೋಪಿಸಿದ್ದರು. ಇದು ರಾಷ್ಟ್ರಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ಮುಂಬೈನ ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಿಂದ ಹಣವನ್ನು ಸಂಗ್ರಹಿಸಲು ಅನಿಲ್ ದೇಶ್‌ಮುಖ್ ತನ್ನ ಅಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾಗಿ ಪರಮ್ ಬಿರ್ ಸಿಂಗ್ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ ಆರೋಪಿಸಿದ ನಂತರ ಮಾಜಿ ಸಚಿವರನ್ನು ಏಪ್ರಿಲ್ 14  ರಂದು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ಪ್ರಾಥಮಿಕ ವಿಚಾರಣೆಯ ಭಾಗವಾಗಿ ಸಿಬಿಐ, ಅನಿಲ್ ದೇಶ್‌ಮುಖ್ ಅವರ ವೈಯಕ್ತಿಕ ಸಹಾಯಕರಾದ ಸಂಜೀವ್ ಪಾಲಂಡೆ ಮತ್ತು ಕುಂದನ್ ಶಿಂಧೆ, ಮಾಜಿ ಪೋಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಇಬ್ಬರು ಚಾಲಕರು, ಬಾರ್ ಮಾಲೀಕರು, ಮುಂಬೈ ಪೊಲೀಸ್  ಅಧಿಕಾರಿಗಳು ಮತ್ತು ಮಾಜಿ ಸಚಿವರಿಗೆ ಹತ್ತಿರವಿರುವ ಜನರನ್ನು ಸಹ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಮುಖ್‌ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಪರಮ್ ವೀರ್ ಸಿಂಗ್ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಿದ್ದರು.

SCROLL FOR NEXT