ದೇಶ

150 ರೂಪಾಯಿ ದರದಲ್ಲೇ ಎರಡೂ ಲಸಿಕೆ ಖರೀದಿ ಮುಂದುವರಿಕೆ: ಕೇಂದ್ರ ಸ್ಪಷ್ಟನೆ

Srinivas Rao BV

ನವದೆಹಲಿ: ಭಾರತದಲ್ಲಿ ಕೊರೋನಾಗೆ ನೀಡಲಾಗುತ್ತಿರುವ ಎರಡು ಲಸಿಕೆಗಳನ್ನು ಪ್ರತಿ ಡೋಸ್ ಗೆ 150 ರೂಪಾಯಿಯ ದರದಲ್ಲೇ ಖರೀದಿಸುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. 

ಏ.24 ರಂದು ಆರೋಗ್ಯ ಸಚಿವಾಲಯ ಲಸಿಕೆ ಖರೀದಿ ದರದಲ್ಲಿನ ಬದಲಾವಣೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದು, ಕೇಂದ್ರ ಸರ್ಕಾರ ತಾನು ಖರೀದಿಸುವ ಲಸಿಕೆಯ ಬೆಲೆಯಲ್ಲಿ ಬದಲಾವಣೆ ಇರುವುದಿಲ್ಲ ಎಂದು ಹೇಳಿದೆ. 

ಮೇ.1 ರಿಂದ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ನೀಡಬೇಕಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ಲಸಿಕೆ ನೀತಿಯನ್ನು ಜಾರಿಗೆ ತಂದಿದೆ. ಇದರಲ್ಲಿ ಲಸಿಕೆ ಖರೀದಿ ವಿಕೇಂದ್ರೀಕರಣಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. 

ಹೊಸ ನೀತಿಯ ಪ್ರಕಾರ ಶೇ.50 ರಷ್ಟು ಲಸಿಕೆಗಳನ್ನು ಕೇಂದ್ರ ಖರೀದಿಸಿದರೆ ಇನ್ನು ಉಳಿದ ಲಸಿಕೆಗಳು ರಾಜ್ಯಗಳು ಹಾಗೂ ಖಾಸಗಿ ಸಂಸ್ಥೆಗಳ ಖರೀದಿಗೆ ಲಭ್ಯವಿರಲಿದೆ. ಕೇಂದ್ರ ಸರ್ಕಾರ ಹೊಸ ಲಸಿಕೆ ನೀತಿಯನ್ನು ಪ್ರಕಟಿಸಿದ ಬೆನ್ನಲ್ಲೇ ಕೋವಿಶೀಲ್ಡ್ ಲಸಿಕೆ ತಯಾರಕ ಸಂಸ್ಥೆ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಲಸಿಕೆಗಳ ಬೆಲೆಯನ್ನು ಪರಿಷ್ಕರಣೆ ಮಾಡುವುದಾಗಿ ಘೋಷಿಸಿದ್ದು, ರಾಜ್ಯಗಳಿಗೆ ಪ್ರತಿ ಡೋಸ್ ಗೆ 400 ರೂಪಾಯಿಗಳ ದರದಲ್ಲಿ ಹಾಗೂ ಖಾಸಗಿ ಕಂಪನಿಗಳಿಗೆ ಪ್ರತಿ ಡೋಸ್ ಗೆ 600 ರೂಪಾಯಿಗಳ ದರದಲ್ಲಿ ಲಸಿಕೆ ಮಾರಾಟ ಮಾಡುವುದಾಗಿ ತಿಳಿಸಿದೆ. 

ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಜಯರಾಮ್ ರಮೇಶ್ ಸುದ್ದಿ ವರದಿಯೊಂದನ್ನು ಆಧರಿಸಿ ಟ್ವೀಟ್ ಮಾಡಿ ಸರ್ಕಾರ 400 ರೂಪಾಯಿ ದರದಲ್ಲಿ ಲಸಿಕೆ ಖರೀದಿಸುವುದನ್ನು ಖಂಡಿಸಿದ್ದರು. ಬೇರೆ ರಾಷ್ಟ್ರಗಳಲ್ಲಿ ಅಲ್ಲಿನ ಸರ್ಕಾರಗಳು ಲಸಿಕೆ ಖರೀದಿಸುವ ದರಕ್ಕಿಂತ ಹೆಚ್ಚಿನ ದರ ಇದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದು, ಕೇಂದ್ರ ಸರ್ಕಾರ ಮಾತ್ರ 150 ರೂಪಾಯಿ ದರದಲ್ಲೇ ಲಸಿಕೆ ಖರೀದಿ ಮುಂದುವರೆಸಲಿದೆ ಎಂದು ಹೇಳಿದೆ. 

ಲಸಿಕೆ ಖರೀದಿ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ದರ ವ್ಯತ್ಯಾಸ ಇರುವುದಕ್ಕೂ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

SCROLL FOR NEXT