ದೇಶ

ಕೋವಿಡ್ ನಿರ್ವಹಣೆಯಲ್ಲಿ ಆರೋಗ್ಯ ಸಚಿವ ಹರ್ಷ ವರ್ಧನ್ ವಿಫಲ, ಕೂಡಲೇ ರಾಜೀನಾಮೆ ನೀಡಲಿ: ಚಿದಂಬರಂ ಆಗ್ರಹ

Srinivasamurthy VN

ನವದೆಹಲಿ: ತಜ್ಞರ ವರದಿ ಮತ್ತು ಎಚ್ಚರಿಕೆಯ ಹೊರತಾಗಿಯೂ ದೇಶದಲ್ಲಿ ಕೋವಿಡ್-19 ಸೋಂಕು ಹೆಚ್ಚಳ ನಿಯಂತ್ರಿಸುವಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ವಿಫಲವಾಗಿದ್ದು, ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ  ಚಿದಂಬರಂ ಆಗ್ರಹಿಸಿದ್ದರು.

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಚಿದಂಬರಂ ಅವರು, 'ಕೋವಿಡ್-19 ಪ್ರಕರಣಗಳ ಏರಿಕೆ ತಡೆಯಲು ಈಗ ಕೈಗೊಳ್ಳುತ್ತಿರುವ ಕ್ರಮಗಳನ್ನು ಮೊದಲೇ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ. ಸೋಂಕು ನಿರ್ವಹಣೆಯಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್ ಅವರು ವಿಫಲರಾಗಿದ್ದು, ಈ ಕೂಡಲೇ ಅವರು  ರಾಜೀನಾಮೆ ನೀಡಬೇಕು' ಎಂದು ಆಗ್ರಹಿಸಿದ್ದಾರೆ.

‘2020ರ ಏಪ್ರಿಲ್‌ನಲ್ಲಿ ಮತ್ತು 2020ರ ಅಕ್ಟೋಬರ್-ನವೆಂಬರ್‌ನಲ್ಲೇ ಸಂಸದೀಯ ಸಮಿತಿ ಹಾಗೂ ತಜ್ಞರು ಎಚ್ಚರಿಕೆ ನೀಡಿದ್ದರು. ಆದರೂ ಸರ್ಕಾರ ನಿನ್ನೆಯಿಂದ ಕೈಗೊಳ್ಳುತ್ತಿರುವ ಕ್ರಮಗಳನ್ನು ಮೊದಲೇ ಕೈಗೊಂಡಿಲ್ಲವೇಕೆ. ಇದು ನಿರ್ಲಕ್ಷ್ಯವಲ್ಲವೇ? ಇದಕ್ಕೆ ಯಾರೂ ಜವಾಬ್ದಾರರಲ್ಲವೇ? ಆರೋಗ್ಯ ಸಚಿವರು  ಮತ್ತು ಕಾರ್ಯದರ್ಶಿಯವರನ್ನು ರಾಜೀನಾಮೆ ನೀಡುವಂತೆ ಕೇಳಬಾರದೇಕೆ?’ ಎಂದು ಟ್ವೀಟ್‌ ಮಾಡಿದ್ದಾರೆ.

ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿಲು ಜನ ಪರದಾಡುತ್ತಿದ್ದಾರೆ. ಸೋಂಕಿತರ ಪರೀಕ್ಷೆ ನಡೆಸುವಂತೆ ವೈದ್ಯರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಸೋಂಕಿತರನ್ನು ಕರೆತರುವಾಗ ಆಮ್ಲಜನಕದ ಸಿಲಿಂಡರ್‌ಗಳನ್ನು ತಮ್ಮ ಬೆನ್ನ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಾರೆ. ಆಮ್ಲಜನಕ ಪೂರೈಸುವಂತೆ ಕೋರಿ ಆಸ್ಪತ್ರೆಗಳು  ಹೈಕೋರ್ಟ್‌ ಮೊರೆಹೋಗುತ್ತಿವೆ. ಆರೋಗ್ಯ ಸಚಿವರೂ ಸೇರಿದಂತೆ ಆಡಳಿತದಲ್ಲಿರುವ ಯಾರಿಗೇ ಆದರೂ ಮನಃಸಾಕ್ಷಿ ಇದ್ದರೆ ಅವರು ರಾಜೀನಾಮೆ ನೀಡಬೇಕು ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

SCROLL FOR NEXT