ದೇಶ

ಮಿಥುನ್ ಚಕ್ರವರ್ತಿ, ದಿಲೀಪ್ ಘೋಷ್ ರಿಂದ ಕೋವಿಡ್ ನಿಯಮ ಉಲ್ಲಂಘನೆ, ದೂರು ದಾಖಲು: ಟಿಎಂಸಿ ನಾಯಕ

Lingaraj Badiger

ಕೋಲ್ಕತಾ: ಬಿಜೆಪಿ ನಾಯಕರಾದ ದಿಲೀಪ್ ಘೋಷ್ ಮತ್ತು ನಟ ಮಿಥುನ್ ಚಕ್ರವರ್ತಿ ಅವರು 500ಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಮೂಲಕ ಕೋವಿಡ್ -19 ಪ್ರೋಟೋಕಾಲ್‌ ಉಲ್ಲಂಘಿಸಿದ್ದಾರೆ ಎಂದು ಟಿಎಂಸಿ ಶನಿವಾರ ಆರೋಪಿಸಿದ್ದು, ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಹೇಳಿದೆ.

ರಾಜ್ಯದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿರುವ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಮತ್ತು ನಟ, ರಾಜಕಾರಣಿ ಮಿಥುನ್ ಚಕ್ರವರ್ತಿ ಅವರು ದಕ್ಷಿಣ ದಿನಾಜ್‌ಪುರ ಮತ್ತು ಮಾಲ್ಡಾ ಜಿಲ್ಲೆಗಳಲ್ಲಿ 500ಕ್ಕೂ ಜನರೊಂದಿಗೆ ಸಾರ್ವಜನಿಕ ಸಭೆಗಳನ್ನು ನಡೆಸಿದ್ದಾರೆ ಎಂದು ಟಿಎಂಸಿಯ ಹಿರಿಯ ಮುಖಂಡ ಸೌಗತಾ ರಾಯ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ಈ ಇಬ್ಬರು ಬಿಜೆಪಿ ನಾಯಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿದ್ದೇವೆ. ಕೊನೆಯ ಹಂತದ ಚುನಾವಣೆಗಳಿಗೆ ಸಾರ್ವಜನಿಕ ಸಭೆ ನಡೆಸದಂತೆ ಅವರನ್ನು ನಿರ್ಬಂಧಿಸಬೇಕು" ಎಂದು ಅವರು ಹೇಳಿದರು. 

ಆದಾಗ್ಯೂ, ಚುನಾವಣಾ ಆಯೋಗ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

"ಬಿಜೆಪಿ ಆದೇಶದ ಮೇರೆಗೆ ಚುನಾವಣಾ ಆಯೋಗ ಕಾರ್ಯನಿರ್ವಹಿಸುತ್ತಿದೆ. ಶುಕ್ರವಾರ ಮತ್ತು ಇಂದು ಬೆಳಗ್ಗೆ ಟಿಎಂಸಿ ನೀಡಿದ ದೂರುಗಳ ಹೊರತಾಗಿಯೂ ಇಬ್ಬರು ಬಿಜೆಪಿ ನಾಯಕರ ವಿರುದ್ಧ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಟಿಎಂಸಿ ಸಂಸದ ದೂರಿದ್ದಾರೆ.

SCROLL FOR NEXT