ದೇಶ

ಅನಗತ್ಯ ಯೋಜನೆಗಳ ಬದಲು ಕೊರೋನಾ ಲಸಿಕೆ, ಆ್ಯಕ್ಸಿಜನ್"ಗಳಿಗೆ ಖರ್ಚು ಮಾಡಿ: ಕೇಂದ್ರಕ್ಕೆ ರಾಹುಲ್ ಗಾಂಧಿ

Manjula VN

ನವದೆಹಲಿ: ಪಿಆರ್ ಮತ್ತು ಇತರೆ ಅನಗತ್ಯ ಯೋಜನೆಗಳ ಬದಲು ಕೊರೋನಾ ಲಸಿಕೆ ಹಾಗೂ ಆ್ಯಕ್ಸಿಜನ್ ಗಳಿಗೆ ಹಣ ಖರ್ಚು ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶನಿವಾರ ಮನವಿ ಮಾಡಿಕೊಂಡಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಪಿಆರ್ ಹಾಗೂ ಇನ್ನಿತರೆ ಅನಗತ್ಯ ಯೋಜನೆಗಳ ಬದಲಿಗೆ ಕೊರೋನಾ ಲಸಿಕೆ, ಆ್ಯಕ್ಸಿಜನ್ ಹಾಗೂ ಇನ್ನಿತರೆ ಆರೋಗ್ಯ ಸೇವೆಗಳಿಗೆ ಹಣ ಖರ್ಚು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಾಂತಿಯುತವಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಪರಿಸ್ಥಿತಿ ಎದುರಿಸಲು ದೇಶ ಸಜ್ಜಾಗಿರಬೇಕಿದೆ. ಪ್ರಸ್ತುತದ ಪರಿಸ್ಥಿತಿ ಅಸಹನೀಯವಾಗಿದೆ ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿಯವರು, ದೇಶದಲ್ಲಿ ಕೊರೋನಾ ವೈರಸ್ ನಿಂದಲ್ಲ... ಮೋದಿ ಸರ್ಕಾರದ ನಿರ್ಲಕ್ಷ್ಯದಿಂದಲೇ ಸೋಂಕಿತರು ಸಾವನ್ನಪ್ಪುತ್ತಿದ್ದಾರೆಂದು ಆರೋಪಿಸಿದ್ದರು. 

ಕೊರೋನಾ ವೈರಸ್ ಸೋಂಕಿನಿಂದಾಗಿ ಮನುಷ್ಯನ ದೇಹದಲ್ಲಿ ಆಮ್ಲಜನಕದ ಕೊರತೆ ಮಾತ್ರ ಉಂಟಾಗುತ್ತದೆ. ಆದರೆ ಮೋದಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ದೇಶದಲ್ಲಿ ರೋಗಿಗಳಿಗೆ ಅನಿವಾರ್ಯವಾಗಿ ಬೇಕಾದ ಆಮ್ಲಜನಕ ಜನಕದ ಸಿಲಿಂಡರ್ ಗಳು ಮತ್ತು ಐಸಿಯು ಬೆಡ್ ಕೊರತೆಯುಂಟಾಗಿದೆ. ಇದರಿಂದಲೇ  ಸಾವಿರಾರು ಮಂದಿ ನಿತ್ಯ ಸಾವಿಗೀಡಾಗುತ್ತಿದ್ದಾರೆ ಎಂದು ಹೇಳಿದ್ದರು. 

SCROLL FOR NEXT