ದೇಶ

ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾ.ಮೋಹನ್ ಎಂ.ಶಾಂತನಗೌಡರ್ ನಿಧನ: ಮುಖ್ಯಮಂತ್ರಿ ಸಂತಾಪ 

Sumana Upadhyaya

ನವದೆಹಲಿ/ಬೆಂಗಳೂರು: ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾ.ಮೋಹನ್ ಎಂ ಶಾಂತನಗೌಡರ್ ಗುರ್ ಗಾಂವ್ ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 62 ವರ್ಷವಾಗಿತ್ತು.

ಶ್ವಾಸಕೋಶದ ಸೋಂಕಿನಿಂದ ಗುರಂಗಾವ್ ನ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದ ಜಸ್ಟೀಸ್ ಶಾಂತನಗೌಡರ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ನಿನ್ನೆಯವರೆಗೆ ಅವರ ಆರೋಗ್ಯ ಸ್ಥಿರವಾಗಿತ್ತು, ಆದರೆ ಮಧ್ಯರಾತ್ರಿ 12.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ನ್ಯಾಯಮೂರ್ತಿಗಳು ಕೋವಿಡ್ ಸೋಂಕಿಗೆ ತುತ್ತಾಗಿದ್ದರೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಕರ್ನಾಟಕ ಹಾವೇರಿ ಜಿಲ್ಲೆಯವರಾದ ಮೋಹನ್ ಶಾಂತನಗೌಡರ್ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ, ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾಗಿಯೂ ಸೇವೆ ಸಲ್ಲಿಸಿದ್ದರು. 2017ರ ಫೆಬ್ರವರಿ 17ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆದಿದ್ದರು.

ಮೇ 5, 1958ರಲ್ಲಿ ಜನಿಸಿದ್ದ ಅವರು ವಿದ್ಯಾಭ್ಯಾಸ ಮುಗಿಸಿ 1980ರ ಸೆಪ್ಟೆಂಬರ್ 5ರಂದು ಅಡ್ವೊಕೇಟ್ ಆದರು. ಮೇ 12, 2003 ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು ನಂತರ, ಸೆಪ್ಟೆಂಬರ್, 2004 ರಲ್ಲಿ ನ್ಯಾಯಾಲಯದಲ್ಲಿ ಖಾಯಂ ನ್ಯಾಯಾಧೀಶರಾದರು.

ನಂತರ ಅವರನ್ನು ಕೇರಳ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು, ಅಲ್ಲಿ ಅವರು ಆಗಸ್ಟ್ 1, 2016 ರಂದು ಕಾರ್ಯಕಾರಿ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡರು. ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಉನ್ನತೀಕರಣಗೊಳ್ಳುವ ಮೊದಲು 2016 ರ ಸೆಪ್ಟೆಂಬರ್ 22 ರಂದು ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು.

ಜಸ್ಟೀಸ್ ಅವರ ನಿಧನಕ್ಕೆ ಸಿಎಂ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

SCROLL FOR NEXT