ದೇಶ

ಆಮ್ಲಜನಕ ಉತ್ಪಾದನೆಗಾಗಿ ಸ್ಟರ್ಲೈಟ್ ಸ್ಥಾವರ ಪುನರ್ ಕಾರ್ಯಾರಂಭಕ್ಕೆ ತಮಿಳುನಾಡು ಸರ್ಕಾರ ಗ್ರೀನ್ ಸಿಗ್ನಲ್

Raghavendra Adiga

ಚೆನ್ನೈ: ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಆಮ್ಲಜನಕದ ತುರ್ತು ಅಗತ್ಯವನ್ನು ಪರಿಗಣಿಸಿ, ತೂತುಕುಡಿಯಲ್ಲಿನ ಸ್ಟರ್ಲೈಟ್ ತಾಮ್ರ ಘಟಕವನ್ನು ಆಮ್ಲಜನಕ ಉತ್ಪಾದನೆಗಾಗಿ ತೆರೆಯಬಹುದು ಎಂದು ಸೋಮವಾರ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳಲಾಯಿತು.

ಮೂಲಗಳ ಪ್ರಕಾರ, ಎಐಎಡಿಎಂಕೆ, ಡಿಎಂಕೆ, ಬಿಜೆಪಿ, ಕಾಂಗ್ರೆಸ್, ಪಿಎಂಕೆ, ಡಿಎಂಡಿಕೆ ಮತ್ತು ಎಡಪಕ್ಷಗಳು ಸೇರಿದಂತೆ ಎಲ್ಲಾ ಪಕ್ಷಗಳು ಸ್ಟರ್ಲೈಟ್ ಸ್ಥಾವರವನ್ನು ಪುನಃ ತೆರೆಯಲು ಒಪ್ಪಿಕೊಂಡಿದ್ದು, ಇದು ಕೇವಲ ಆಮ್ಲಜನಕ ಉತ್ಪಾದನೆಗೆ ಸೀಮಿತವಾಗಿರಲಿದೆ ಎನ್ನುವುದು ಗಮನಾರ್ಹ.

ಡಿಎಂಕೆ ಮಹಿಳಾ ವಿಭಾಗದ ಕಾರ್ಯದರ್ಶಿ ಮತ್ತು ತೂತುಕುಡಿ ಸಂಸದೆ ಕನಿಮೋಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ಆಮ್ಲಜನಕ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಾಲ್ಕು ತಿಂಗಳವರೆಗೆ ಅನುಮತಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ. ಪರಿಸ್ಥಿತಿಯನ್ನು ಆಧರಿಸಿ ನಿರ್ಧಾರವನ್ನು ನಂತರ ಪರಿಶೀಲಿಸಲಾಗುವುದು". ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಆಮ್ಲಜನಕದ ಪ್ರಸ್ತುತ ಬೇಡಿಕೆಯನ್ನು ಪೂರೈಸಲು ದಿನಕ್ಕೆ 1,000 ಟನ್ ಆಮ್ಲಜನಕವನ್ನು ಉತ್ಪಾದಿಸುವ ಘಟಕವನ್ನು ತೆರೆಯಲು ಸ್ಟರ್ಲೈಟ್ ಸ್ಥಾವರವನ್ನು ನಡೆಸುತ್ತಿರುವ ವೇದಾಂತ ಸಮೂಹದ ಮನವಿಯನ್ನು ಸುಪ್ರೀಂ ಕೋರ್ಟ್ ಸ್ವೀಕರಿಸಿದ ಬೆನ್ನಲ್ಲೇ ಈ ಸರ್ವಪಕ್ಷ ಸಭೆ ನಡೆದಿದೆ.

ನಿರ್ಣಯದನ್ವಯ ಸ್ಟರ್ಲೈಟ್ ಸ್ಥಾವರವು ಟ್ಯಾಂಗೆಡ್ಕೊ ಸರಬರಾಜು ಮಾಡಿದ ವಿದ್ಯುತ್ ಬಳಸಿ ಆಮ್ಲಜನಕವನ್ನು ಉತ್ಪಾದಿಸಬಹುದು. ತಾಮ್ರ ಮತ್ತು ಇತರ ಉಪ ಉತ್ಪನ್ನಗಳ ಉತ್ಪಾದನೆಗೆ ಯಾವುದೇ ಅನುಮತಿ ಇಲ್ಲ. ಇದಲ್ಲದೆ, ಯಾವುದೇ ಹೆಚ್ಚುವರಿ ಆಮ್ಲಜನಕವನ್ನು ಇತರ ರಾಜ್ಯಗಳಿಗೆ ಪೂರೈಸಬಹುದು ಎಂದು ನಿರ್ಣಯದಲ್ಲಿ ಸೇರಿಸಲಾಗಿದೆ. ಆಮ್ಲಜನಕದ ಉತ್ಪಾದನೆಯನ್ನು ಜಿಲ್ಲಾಧಿಕಾರಿಗಳು  ಮತ್ತು ಪರಿಸರ ಕಾರ್ಯಕರ್ತರು ಸೇರಿದಂತೆ ತಜ್ಞರ ತಂಡ ಮೇಲ್ವಿಚಾರಣೆ ಮಾಡುತ್ತದೆ.

SCROLL FOR NEXT