ದೇಶ

ಕೊರೋನಾ ಕರ್ಫ್ಯೂ: ಕೆಲಸದ ಸ್ಥಳಕ್ಕೆ ಕಾರ್ಮಿಕರು ಬರಲು ಬಸ್ ಬಿಡಿ; ಕೈಗಾರಿಕೆಗಳ ಒತ್ತಾಯ

Srinivasamurthy VN

ಬೆಂಗಳೂರು: ಕೊರೋನಾ ಕರ್ಫ್ಯೂ ವೇಳೆ ಕೆಲಸದ ಸ್ಥಳಕ್ಕೆ ಕಾರ್ಮಿಕರು ಬರಲು ಬಸ್ ಸೇವೆ ಒದಗಿಸುವಂತೆ ಕೈಗಾರಿಕಾ ವಲಯ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿದೆ.

14 ದಿನಗಳ ಕೊರೋನಾ ಕರ್ಫ್ಯೂ ಇಂದು ರಾತ್ರಿಯಿಂದ ಜಾರಿಗೆ ಬರುತ್ತಿದ್ದು, ಕರ್ನಾಟಕ ಸರ್ಕಾರ ಕರ್ಫ್ಯೂನಿಂದ ಉತ್ಪಾದನಾ ವಲಯವನ್ನು ಹೊರಗಿಟ್ಟಿದೆ. ಹೀಗಾಗಿ ಕೊರೋನಾ ಕರ್ಫ್ಯೂ ನಿರ್ಬಂಧಗಳಿಂದ ಉತ್ಪಾದನಾ ವಲಯಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ. ಆದರೆ ಕರ್ಫ್ಯೂ ಸಂದರ್ಭದಲ್ಲಿ ಎಲ್ಲ ರೀತಿಯ  ಸಾರಿಗೆ ಸೇವೆಗಳನ್ನು ರದ್ದು ಮಾಡಲಾಗಿದ್ದು, ಸಾರಿಗೆ ಸೇವೆಗಳು ಇಲ್ಲದೇ ಕಾರ್ಮಿಕರು ಕೆಲಸದ ಸ್ಥಳ ತಲುಪಲು ತೊಂದರೆಯಾಗುತ್ತದೆ. ಇದು ಕೈಗಾರಿಕೋಧ್ಯಮಿಗಳ ತಲೆನೋವಿಗೆ ಕಾರಣವಾಗಿದೆ. ಇದೇ ಕಾರಣಕ್ಕೆ ಕೈಗಾರಿಕೋದ್ಯಮಿಗಳು ಕಾರ್ಮಿಕರಿಗಾಗಿ ಬಸ್ ಸೇವೆ ಒದಗಿಸುವಂತೆ ಸರ್ಕಾರಕ್ಕೆ ಮನವಿ  ಮಾಡಿವೆ.

ಈ ಕುರಿತು ಮಾತನಾಡಿದ ಕರ್ನಾಟಕ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಅಸೋಸಿಯೇಶನ್ (ಕಸ್ಸಿಯಾ) ಅಧ್ಯಕ್ಷ ಕೆ.ಬಿ.ಅರಸಪ್ಪ ಅವರು, 'ಹೆಚ್ಚಿನ ಕಾರ್ಖಾನೆಯ ಕಾರ್ಮಿಕರು ಕೆಲಸ ಮಾಡಲು ಪ್ರಯಾಣಿಸಲು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವುದರಿಂದ ಕೈಗಾರಿಕಾ ಕೇಂದ್ರಗಳಿಗೆ ಸಾರಿಗೆ ನಿಗಮ  ಬಸ್ಸುಗಳನ್ನು ಓಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಅಂತೆಯೇ ಕೈಗಾರಿಕಾ ವಲಯಕ್ಕೆ ಸಾಧ್ಯವಾದಷ್ಟು ಮಟ್ಟಿಗೆ ಆಮ್ಲಜನಕವನ್ನು ಪೂರೈಸಲು ಅನುಮತಿ ನೀಡುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದರು.

ಎಂಎಸ್ಎಂಇ ವಲಯದ ಎಲ್ಲಾ ಕೈಗಾರಿಕೆಗಳನ್ನು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲು ಪ್ರೋತ್ಸಾಹಿಸುವ ಮೂಲಕ ಮತ್ತು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿನ ಏರಿಕೆಯನ್ನು ನಿರ್ಬಂಧಿಸಲು ಮತ್ತು ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ಸರ್ಕಾರಕ್ಕೆ ಸಹಾಯ ಮಾಡುವ ಮೂಲಕ ರಾಜ್ಯ  ಸರ್ಕಾರದೊಂದಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಕಸ್ಸಿಯಾ ಸರ್ಕಾರಕ್ಕೆ ಭರವಸೆ ನೀಡಿತು. 
 

SCROLL FOR NEXT