ದೇಶ

ಲೆಫ್ಟಿನೆಂಟ್ ಗವರ್ನರ್ ಗೆ ದೆಹಲಿಯಲ್ಲಿ ಪರಮಾಧಿಕಾರ ನೀಡುವ ಕಾಯ್ದೆ ಅನ್ವಯ ಗೃಹ ಸಚಿವಾಲಯ ಅಧಿಸೂಚನೆ ಪ್ರಕಟ

Srinivas Rao BV

ನವದೆಹಲಿ: ದೆಹಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಗೆ ಚುನಾಯಿತ ಸರ್ಕಾರಕ್ಕಿಂತ ಹೆಚ್ಚು ಅಧಿಕಾರ ನೀಡುವ ಕಾಯ್ದೆಯ ಅನ್ವಯ ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಪ್ರಕಟಿಸಿದೆ. 

ಈ ಅಧಿಸೂಚನೆಯಿಂದಾಗಿ ಇನ್ನು ಮುಂದೆ ದೆಹಲಿಯಲ್ಲಿ ಚುನಾಯಿತ ಸರ್ಕಾರಕ್ಕಿಂತಲೂ ಹೆಚ್ಚಿನ ಅಧಿಕಾರವನ್ನು ಲೆಫ್ಟಿನೆಂಟ್ ಗವರ್ನರ್ ಹೊಂದಿರಲಿದ್ದಾರೆ. ಏ.27 ರಿಂದಲೇ ಹೊಸ ಕಾಯ್ದೆ ಜಾರಿಗೆ ಬರಲಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಚುನಾಯಿತ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಬೇಕಿದ್ದರೂ ಇನ್ನು ಮುಂದೆ ಲೆಫ್ಟಿನೆಂಟ್ ಗವರ್ನರ್ ಅವರ ಅಭಿಪ್ರಾಯವನ್ನು ಕೇಳಿ ಮುಂದುವರೆಯುವುದು ಕಡ್ಡಾಯವಾಗಲಿದೆ. 

ದೆಹಲಿಯ ಪೊಲೀಸ್, ಪಬ್ಲಿಕ್ ಆರ್ಡರ್ ಹಾಗೂ ಭೂಮಿಗೆ ಸಂಬಂಧಪಟ್ಟ ವಿಷಯಗಳು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಈಗಾಗಲೇ ಇದೆ. ಆರೋಗ್ಯ, ಶಿಕ್ಷಣ, ಕೃಷಿ, ಅರಣ್ಯ, ಸಾರಿಗೆಯಂತಹ ಕೆಲವೇ ಕೆಲವು ಅಂಶಗಳು ಮಾತ್ರ ಸ್ಥಳೀಯ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ಈ ವರೆಗೂ ಸರ್ಕಾರ ಇದಕ್ಕೆ ಸಂಬಂಧಪಟ್ಟ ನಿರ್ಧಾರಗಳನ್ನು ಸ್ವತಂತ್ರವಾಗಿ ಕೈಗೊಳ್ಳಬಹುದಿತ್ತು. ಆದರೆ ಕಾಯ್ದೆಗೆ ತಿದ್ದುಪಡಿ ತಂದು, ಅಧಿಸೂಚನೆ ಪ್ರಕಟಗೊಂಡಿರುವ ಪರಿಣಾಮವಾಗಿ ಇನ್ನು ಮುಂದೆ ದೆಹಲಿಯ ಚುನಾಯಿತ ಸರ್ಕಾರ ತನ್ನ ವ್ಯಾಪ್ತಿಗೆ ಬರುವ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾದರೂ ಲೆಫ್ಟಿನೆಂಟ್ ಗವರ್ನರ್ ಅವರ ಅಭಿಪ್ರಾಯ ಪ್ರಮುಖ ಪಾತ್ರ ವಹಿಸಲಿದೆ. 

ಈ ಕಾಯ್ದೆಯನ್ನು ಕೇಜ್ರಿವಾಲ್ ನೇತೃತ್ವದ ಸರ್ಕಾರ ಪ್ರಾರಂಭದಿಂದಲೂ ವಿರೋಧಿಸುತ್ತಿದ್ದು, ಮಸೂದೆಯನ್ನು ಹಿಂಪಡೆಯುವುದಕ್ಕೆ ಕೇಜ್ರಿವಾಲ್ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

SCROLL FOR NEXT