ದೇಶ

ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರ ಪ್ರವೇಶಿಸಲು ಕೊರೋನಾ ನೆಗಟಿವ್ ವರದಿ ಅಥವಾ ಪೂರ್ಣ ವ್ಯಾಕ್ಸಿನೇಷನ್ ಕಡ್ಡಾಯ: ಇಸಿ

Lingaraj Badiger

ನವದೆಹಲಿ: ಅಭ್ಯರ್ಥಿಗಳು ಅಥವಾ ಅವರ ಏಜೆಂಟರು ಮತ ಎಣಿಕೆ ಕೇಂದ್ರ ಪ್ರವೇಶಿಸಲು ಕೊರೋನಾ ವೈರಸ್ ನೆಗಟಿವ್ ವರದಿ ಅಥವಾ ಎರಡು ಡೋಸ್ ಕೋವಿಡ್ -19 ಲಸಿಕೆ ಪಡೆದಿರುವುದು ಕಡ್ಡಾಯ ಎಂದು ಚುನಾವಣಾ ಆಯೋಗ ಹೇಳಿದೆ.

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆ ಮತ್ತು ಲೋಕಸಭಾ ಉಪ ಚುನಾವಣೆಯ ಮತ ಎಣಿಕೆ ಮೇ 2 ರಂದು ನಡೆಯಲಿದೆ.

ಈ ಮಧ್ಯ ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಮತ ಎಣಿಕೆ ಕೇಂದ್ರದ ಹೊರಗೆ ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ. ಆದರೆ ಅಭ್ಯರ್ಥಿಗಳಿಗೆ ಮೊದಲನೆ ಏಜೆಂಟ್ ಗೆ ಕೋವಿಡ್ ಪಾಸಿಟಿವ್ ಬಂದಿದ್ದರೆ ಹೊಸ ಏಜೆಂಟ್ ಹೆಸರಿಸಲು ಅವಕಾಶ ನೀಡಲಾಗಿದೆ.

"ಆರ್ಟಿ-ಪಿಸಿಆರ್ / ಆರ್ ಎಟಿ ಪರೀಕ್ಷೆ ಇಲ್ಲದೆ ಅಥವಾ ಎರಡು ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ಯಾವುದೇ ಅಭ್ಯರ್ಥಿಗಳು ಅಥವಾ ಏಜೆಂಟರನ್ನು ಮತ ಎಣಿಕೆ ಕೇಂದ್ರ ಪ್ರವೇಶಿಸಲು ಅನುಮತಿ ಇಲ್ಲ. ಒಂದು ವೇಳೆ 48 ಗಂಟೆಗಳ ಒಳಗೆ ಪಡೆದ ಕೋವಿಡ್ ನೆಗಟಿವ್ ವರದಿ ಇದ್ದರೆ ಮತ ಎಣಿಕೆ ಕೇಂದ್ರ ಪ್ರವೇಶಿಸಲು ಅನುಮತಿಸಲಾಗುವುದು ಎಂದು" ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.

ಜಿಲ್ಲಾ ಚುನಾವಣಾ ಅಧಿಕಾರಿಗಳು ಅಭ್ಯರ್ಥಿಗಳು ಮತ್ತು ಅವರ ಏಜೆಂಟ್ ಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

SCROLL FOR NEXT