ದೇಶ

ಪಶ್ಚಿಮ ಬಂಗಾಳ ಚುನಾವಣೆ: ಬೆಳಗ್ಗೆ 9.30ರ ಹೊತ್ತಿಗೆ ಶೇ.16.04ರಷ್ಟು ಮತದಾನ, ಉತ್ತರ ಕೋಲ್ಕತ್ತಾ ಮತಗಟ್ಟೆ ಸಮೀಪ ಬಾಂಬ್ ಪತ್ತೆ

Sumana Upadhyaya

ಕೋಲ್ಕತ್ತಾ: ಪಶ್ಚಿಮ ಬಂಗಾಳದ 35 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಅಂತಿಮ ಮತ್ತು ಕೊನೆಯ ಹಂತದ ಮತದಾನ ನಡೆಯುತ್ತಿದ್ದು ಬೆಳಗ್ಗೆ 9.31ರ ಹೊತ್ತಿಗೆ ಶೇಕಡಾ 16.04ರಷ್ಟು ಮತದಾನವಾಗಿದೆ.

ಉತ್ತರ ಕೋಲ್ಕತ್ತಾದ ಮಹಾಜತಿ ಸದನ್ ಆಡಿಟೋರಿಯಂ ಸಮೀಪ ಬಾಂಬ್ ನ್ನು ಎಸೆಯಲಾಗಿದ್ದು ಚುನಾವಣಾ ಆಯೋಗ ಘಟನೆ ಬಗ್ಗೆ ವರದಿ ಕೇಳಿದೆ.

ತೃಣಮೂಲ ಕಾಂಗ್ರೆಸ್ ನ ಬಿರ್ಬಿಮ್ ಜಿಲ್ಲೆಯ ಅಧ್ಯಕ್ಷ ಅನುಬ್ರತ ಮೊಂಡಲ್ ಅವರ ವಿರುದ್ಧ ಹಲವು ದೂರುಗಳು ಇರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕಣ್ಗಾವಲನ್ನು ನಾಳೆ ಬೆಳಗ್ಗೆ 7 ಗಂಟೆಯವರೆಗೆ ಚುನಾವಣಾ ಆಯೋಗ ಇರಿಸಿದೆ.

ಬಿರ್ಬಿಮ್ ಜಿಲ್ಲೆಯ ಮತಗಟ್ಟೆ ಸಂಖ್ಯೆ 188ರಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದು ಮತದಾನ ಅರ್ಧಗಂಟೆ ತಡವಾಗಿ ಆರಂಭವಾಯಿತು.

ಬಿಜೆಪಿ ನಾಯಕ ಹಾಗೂ ನಟ ಮಿಥುನ್ ಚಕ್ರವರ್ತಿ ಉತ್ತರ ಕೋಲ್ಕತ್ತಾದ ಕಾಶಿಪುರ್-ಬೆಲ್ಗಚಿಯಾದಲ್ಲಿ ಮತ ಚಲಾಯಿಸಿ ಈ ಹಿಂದೆ ನಾನು ಯಾವತ್ತೂ ಇಷ್ಟೊಂದು ಶಾಂತಿಯುತವಾಗಿ ಮತದಾನ ಮಾಡಿರಲಲ್ಲ, ಭದ್ರತಾ ಸಿಬ್ಬಂದಿಗೆ ಅಭಿನಂದನೆಗಳು ಎಂದರು.

ಪಶ್ಚಿಮ ಬಂಗಾಳದಲ್ಲಿ ಕೊನೆಯ ಮತ್ತು ಎಂಟನೇ ಹಂತದ ವಿಧಾನಸಭಾ ಚುನಾವಣೆಯ 35 ಸ್ಥಾನಗಳಿಗೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ 7 ಗಂಟೆಗೆ ಮತದಾನ ಆರಂಭವಾಯಿತು. ಮುಂಜಾನೆಯಿಂದಲೇ ಹೆಚ್ಚಿನ ಮತದಾನ ಕೇಂದ್ರಗಳ ಹೊರಗೆ ಮತದಾರರು ಸಾಲಿನಲ್ಲಿ ನಿಂತಿರುವುದು ಕಂಡುಬಂತು.

ನಿನ್ನೆ ರಾಜ್ಯದಲ್ಲಿ  ಅತಿ ಹೆಚ್ಚು 17 ಸಾವಿರದ 207 ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, 77 ಮಂದಿ ನಿನ್ನೆ ಒಂದೇ ದಿನ ಬಲಿಯಾಗಿದ್ದಾರೆ. ಈ ಹಂತದಲ್ಲಿ 283 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು 84.77 ಲಕ್ಷ ಮತದಾರರು ನಿರ್ಧರಿಸಲಿದ್ದಾರೆ.
ಮುಕ್ತ ಮತ್ತು ನ್ಯಾಯಯುತ ಮತದಾನಕ್ಕಾಗಿ ಚುನಾವಣಾ ಆಯೋಗ ಕೇಂದ್ರ ಪಡೆಗಳ 641 ತುಕಡಿಗಳನ್ನು ನಿಯೋಜಿಸಿದೆ.

SCROLL FOR NEXT