ದೇಶ

ಅರ್ಚಕರೊಂದಿಗೆ ಅನುಚಿತ ವರ್ತನೆ, ಬಿಜೆಪಿ ಸಂಸದ ಧರ್ಮೇಂದ್ರ ಕಶ್ಯಪ್ ವಿರುದ್ಧ ಕೇಸ್ ದಾಖಲು

Lingaraj Badiger

ಡೆಹ್ರಾಡೂನ್: ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಜಗೇಶ್ವರ ಧಾಮ ದೇವಸ್ಥಾನದಲ್ಲಿ ಗಲಭೆ ಸೃಷ್ಟಿಸಿದ ಮತ್ತು ಅರ್ಚಕರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಓನ್ಲಾದ ಬಿಜೆಪಿ ಸಂಸದ ಧರ್ಮೇಂದ್ರ ಕಶ್ಯಪ್ ಮತ್ತು ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ದೇವಾಲಯದ ಅರ್ಚಕರೊಂದಿಗೆ ಕಶ್ಯಪ್ ಮತ್ತು ಆತನ ಸಹಚರರು ತೀವ್ರ ವಾಗ್ವಾದದಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಮಾರನೆ ದಿನ ಬಿಜೆಪಿ ಸಂಸದರ ವಿರುದ್ಧ ಕೇಸ್ ದಾಖಲಿಸಲಾಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ರಾಜ್ಯ ಬಿಜೆಪಿ, ಘಟನೆಯ ಕುರಿತು ವಿವರಗಳನ್ನು ಸಂಗ್ರಹಿಸುತ್ತಿದೆ ಮತ್ತು ಕೇಂದ್ರ ನಾಯಕರಿಗೆ ತಿಳಿಸುವುದಾಗಿ ಹೇಳಿದೆ.

"ಸಂಸದ (ಧರ್ಮೇಂದ್ರ ಕಶ್ಯಪ್) ಮತ್ತು ಆತನ ಸ್ನೇಹಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ಮತ್ತು 504 (ಉದ್ದೇಶಪೂರ್ವಕ ಅವಮಾನ) ಅಡಿ ಕೇಸ್ ದಾಖಲಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಗೋಪಾಲ್ ಸಿಂಗ್ ಬಿಶ್ತ್ ತಿಳಿಸಿದ್ದಾರೆ.

ಕಶ್ಯಪ್ ಮತ್ತು ಆತನ ಸಹಚರರು ಶನಿವಾರ ಮಧ್ಯಾಹ್ನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. 

ಕೋವಿಡ್ ಮಾರ್ಗಸೂಚಿಗಳಿಗೆ ಅನುಸಾರವಾಗಿ ಪ್ರತಿದಿನ ಸಂಜೆ 6 ಗಂಟೆಗೆ ದೇವಾಲಯ ಮುಚ್ಚಲಾಗುತ್ತದೆ. ಆದರೆ ಸಂಜೆ 6.30 ಆದರೂ ಸಂಸದ ಮತ್ತು ಆತನ ಸ್ನೇಹಿತರು ದೇವಸ್ಥಾನದ ಒಳಗೆ ಇದ್ದರು ಎಂದು ಜಗೇಶ್ವರ ಧಾಮ ಮಂದಿರ ಸಮಿತಿ ವ್ಯವಸ್ಥಾಪಕ ಭಗವಾನ್ ಭಟ್ ಹೇಳಿದ್ದಾರೆ.

SCROLL FOR NEXT