ದೇಶ

ಗಡಿ ಘರ್ಷಣೆ: ಎಫ್ ಐಆರ್ ಹಿಂಪಡೆಯಲು ಮಿಜೋರಾಂ ಮುಖ್ಯಮಂತ್ರಿ ಆದೇಶ

Nagaraja AB

ಐಝ್ವಾಲ್: ಅಸ್ಸಾಂ- ಮಿಜೋರಾಂ ಗಡಿ ಘರ್ಷಣೆ ಪ್ರಕರಣದಲ್ಲಿನ ಎಲ್ಲಾ ಆರೋಪಿಗಳ ವಿರುದ್ಧ ವೈರೆಂಗ್ಟೆ, ಕೊಲಾಸಿಬ್ ಜಿಲ್ಲೆಯಲ್ಲಿ ಜುಲೈ 26 ರಂದು ದಾಖಲಿಸಲಾಗಿದ್ದ ಎಫ್ ಐಆರ್ ಹಿಂಪಡೆಯಲು ಮಿಜೋರಾಂ ಪೊಲೀಸರಿಗೆ ಮುಖ್ಯಮಂತ್ರಿ ಜೋರಂಥಂಗ ಆದೇಶಿಸಿದ್ದಾರೆ.

ಈ ಮಧ್ಯೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದ ಮಿಜೋರಾಂ ರಾಜ್ಯಪಾಲ ಕೆ. ಹರಿ ಬಾಬು, ಈ ವಿಚಾರದಲ್ಲಿ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದರು. ತದನಂತರ ಬಾಬು ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡಾ ಭೇಟಿ ಮಾಡಿದರು. ರಾಜ್ಯದಲ್ಲಿನ ಪರಿಸ್ಥಿತಿ ಕುರಿತಂತೆ ಚರ್ಚಿಸಿದರು. ಗೃಹ ಸಚಿವರು ಪರಿಸ್ಥಿತಿಯನ್ನು ಪರಿಹರಿಸಲಿದ್ದಾರೆ ಎಂದರು.

ಪ್ರಧಾನ ಮಂತ್ರಿ ಜೊತೆಗಿನ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಾಬು, ಈ ಘಟನೆ ಅತ್ಯಂತ ದುರದೃಷ್ಟಕರವಾದದ್ದು, ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಲು ಗೃಹ ಸಚಿವರು ಪ್ರಯತ್ನಿಸುತ್ತಿದ್ದಾರೆ. ಶಾಂತಿಯನ್ನು ಮರು ಸ್ಥಾಪಿಸಲು ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳ ಮುಖ್ಯಮಂತ್ರಿಗಳು ಬದ್ಧರಾಗಿದ್ದಾರೆ ಎಂದು ಅವರು ಹೇಳಿದರು.

ಜುಲೈ 25 ರಂದು ದೊಲೈ ಬಳಿಯ ಕ್ಯಾಚರ್ ಗಡಿಯಲ್ಲಿ ನಡೆದ ಉಭಯ ರಾಜ್ಯಗಳ ನಡುವಿನ ಪೊಲೀಸರ ಗುಂಡಿನ ಕಾಳಗದಲ್ಲಿ ಅಸ್ಸಾಂನ ಆರು ಪೊಲೀಸರು, ಓರ್ವ ನಾಗರಿಕ ಮೃತಪಟ್ಟಿದ್ದರು. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

SCROLL FOR NEXT