ದೇಶ

ಕೊರೋನಾ ವೈರಸ್ ಕೊಲ್ಲುವ ನಾಸಲ್ ಸ್ಪ್ರೇ ಶೀಘ್ರದಲ್ಲೇ ಭಾರತದಲ್ಲಿ ಲಭ್ಯ

Srinivasamurthy VN

ನವದೆಹಲಿ: ಮಾರಕ ಕೊರೋನಾ ವೈರಸ್ ಅನ್ನು ಕೊಲ್ಲುವ ಸಾಮರ್ಥ್ಯವಿರುವ ಪರಿಣಾಮಕಾರಿ ನಾಸಲ್ ಸ್ಪ್ರೇ ಶೀಘ್ರದಲ್ಲೇ ಭಾರತದಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಮತ್ತು ಕೆನಡಿಯನ್ ಬಯೋಟೆಕ್ ಸಂಸ್ಥೆ ಸ್ಯಾನೋಟೈಜ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಕಾರ್ಪೊರೇಷನ್ ಸಂಸ್ಥೆ ಈ ನಾಸಲ್ ಸ್ಪ್ರೇಯನ್ನು ಸಂಶೋಧಿಸಿದ್ದು,ಸ ಶೀಘ್ರದಲ್ಲೇ ಭಾರತ ಮತ್ತು  ಏಷ್ಯಾದ ಮಾರುಕಟ್ಟೆಗಳಲ್ಲಿ ಇದು ಲಭ್ಯವಾಗುವ ನಿರೀಕ್ಷೆ ಇದೆ. ಕೋವಿಡ್ -19 ಚಿಕಿತ್ಸೆಯಲ್ಲಿ  ಈ ನೈಟ್ರಿಕ್ ಆಕ್ಸೈಡ್ ನಾಸಲ್ ಸ್ಪ್ರೇ (NONS) ಪರಿಣಾಮಕಾರಿ ಕೆಲಸ ಮಾಡಲಿದೆ ಎಂದು ಸಂಸ್ಥೆ ಹೇಳಿದೆ. ಅಲ್ಲದೆ ಇದು ವಿಶೇಷವಾದ ದೀರ್ಘಾವಧಿಯ ಕಾರ್ಯತಂತ್ರದ ಪಾಲುದಾರಿಕೆಯಾಗಿರಲಿದೆ ಎಂದೂ ಸ್ಪಷ್ಟಪಡಿಸಿದೆ.

ಮೊದಲ 24 ಗಂಟೆಗಳಲ್ಲಿ, NONS ಸರಾಸರಿ ವೈರಲ್ ಲೋಡ್ ಅನ್ನು ಸುಮಾರು ಶೇ.95 ರಷ್ಟು ಕಡಿಮೆ ಮಾಡಿತು ಮತ್ತು ನಂತರ 72 ಗಂಟೆಗಳಲ್ಲಿ 99 ಪ್ರತಿಶತಕ್ಕಿಂತ ಹೆಚ್ಚು ಕಡಿಮೆ ಮಾಡಿತು. ಬ್ರಿಟನ್ ಮತ್ತು ಕೆನಡಾ ಕ್ಲಿನಿಕಲ್ ಪ್ರಯೋಗಗಳ ಭಾಗವಾಗಿ ಆರೋಗ್ಯವಂತ ಸ್ವಯಂಸೇವಕರು ಮತ್ತು ರೋಗಿಗಳಲ್ಲಿ  ಇದನ್ನು ಪರೀಕ್ಷಿಸಲಾಗಿದೆ. ಸರಳವಾದ ಮೂಗಿನ ಸಿಂಪಡಣೆಯ ರೂಪದಲ್ಲಿ ಇದು ಲಭ್ಯವಿದೆ. ಇದು ಶ್ವಾಸಕೋಶವನ್ನು ಬಿಸಿಯಾಗಿಸಿ ಕೋವಿಡ್ ಸೋಂಕು ಹರಡುವುದನ್ನು ತಡೆಯುವ ಮೂಲಕ ಮೇಲ್ಭಾಗದ ಶ್ವಾಸನಾಳದಲ್ಲಿ ವೈರಸ್ ಅನ್ನು ಕೊಲ್ಲುವಂತೆ ವಿನ್ಯಾಸಗೊಳಿಸಲಾಗಿದೆ. ಇದು ನೈಟ್ರಿಕ್ ಆಕ್ಸೈಡ್ (NO)  ಅನ್ನು ಆಧರಿಸಿದೆ, ಸಾಬೀತಾದ ಸೂಕ್ಷ್ಮಜೀವಿ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ನೈಸರ್ಗಿಕ ನ್ಯಾನೊ-ಅಣು, ಮತ್ತು ಇದು SARS-CoV-2 ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಕಳೆದ ಮಾರ್ಚ್‌ನಲ್ಲಿ, ಈ ಸ್ಯಾನೋಟೈಸ್‌ನ ಕ್ಲಿನಿಕಲ್ ಪ್ರಯೋಗಗಳಿಂದ ಈ ಸ್ಪ್ರೇ ಕೋವಿಡ್ -19 ರ ಹರಡುವಿಕೆಯನ್ನು ತಡೆಗಟ್ಟಲು ನೆರವಾಗಲಿದೆ ಎಂದು ತೋರಿಸಿತ್ತು. ಕೋವಿಡ್ ಔಷಧಿಗಳ ರೋಗಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡಲು ಈ ಔಷಧಿ ಸುರಕ್ಷಿತ ಮತ್ತು ಪರಿಣಾಮಕಾರಿ ಆಂಟಿ-ವೈರಲ್  ಚಿಕಿತ್ಸೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. 

ಈಗಾಗಲೇ ಹಲವು ದೇಶಗಳು ತಮ್ಮ ಕೋವಿಡ್ ಚಿಕಿತ್ಸೆಯಲ್ಲಿ ಈ ನಾಸಲ್ ಸ್ಪ್ರೇಯನ್ನು ಅಳವಡಿಸಿಕೊಳ್ಳಲು ಉತ್ಸುಕತೆ ತೋರಿವೆ. ಏಷ್ಯಾದ ಇತರೆ ಮಾರುಕಟ್ಟೆಗಳು ಅಂದರೆ ಸಿಂಗಾಪುರ, ಮಲೇಷ್ಯಾ, ಹಾಂಕಾಂಗ್, ತೈವಾನ್, ನೇಪಾಳ, ಬ್ರೂನಿ, ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್, ಶ್ರೀಲಂಕಾ,  ಟಿಮೋರ್-ಲೆಸ್ಟೆ ಮತ್ತು ವಿಯೆಟ್ನಾಂ ದೇಶಗಳು ಈ ಔಷಧಿ ಖರೀದಿಗೆ ಮುಂದಾಗಿವೆ. 
 

SCROLL FOR NEXT