ದೇಶ

ಮಾವೋ ಉಗ್ರ ಪೀಡಿತ ಬಸ್ತಾರ್ ನಲ್ಲಿ ಶಿಕ್ಷಣ ಕುಂಠಿತ: 1588 ಶಾಲೆಗಳಲ್ಲಿ ಒಬ್ಬೊಬ್ಬರೇ ಶಿಕ್ಷಕರು, ಶಿಕ್ಷಕರಿಗಿಂತ ಭದ್ರತಾ ಸಿಬ್ಬಂದಿಗಳೇ ಹೆಚ್ಚು!

Srinivas Rao BV

ರಾಯ್ ಪುರ: ಮಾವೋವಾದಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿರುವ ಚತ್ತೀಸ್ ಗಢದ ದಕ್ಷಿಣಕ್ಕೆ ಇರುವ ಬಸ್ತಾರ್ ನ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿ ಕಾಡುತ್ತಿದೆ. 

ಒಂದೆಡೆ ಮಾವೋವಾದಿಗಳ ಪಿಡುಗು ಜಿಲ್ಲೆಯನ್ನು ಬಾಧಿಸುತ್ತಿದ್ದರೆ ಮತ್ತೊಂದೆಡೆ ಶಿಕ್ಷಕರ ಕೊರತೆಯನ್ನು ನೀಗಿಸುವುದು ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಈ ಪ್ರದೇಶದಲ್ಲಿ ಶಿಕ್ಷಕರಿಗಿಂತಲೂ ಭದ್ರತಾ ಸಿಬ್ಬಂದಿಗಳು (60000ಮಂದಿ) ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 

ಒಂದೂವರೆ ವರ್ಷಗಳ ಬಳಿಕ ಈಗ 10-12 ನೇ ತರಗತಿಗಳಿಗೆ ಶಾಲೆ/ಕಾಲೇಜುಗಳನ್ನು ಪುನಃ ಪ್ರಾರಂಭಿಸಲಾಗಿದೆ. ಆದರೆ ಕೇರಳ ರಾಜ್ಯಕ್ಕಿಂತಲೂ ದೊಡ್ಡದಾದ ಬುಡಕಟ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಬಸ್ತಾರ್ ಪ್ರಾಂತ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ಕಾಣಬೇಕಿದೆ. ಈ ಪ್ರಾಂತ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಶೈಕ್ಷಣಿಕ ಹಾಗೂ ಕಲಿಕಾ ಪ್ರಕ್ರಿಯೆಗಳು ಅವ್ಯವಸ್ಥೆಗೀಡಾಗಿದೆ. 

ಶಿಕ್ಷಣ ಇಲಾಖೆಯ ಅಧಿಕಾರಿಗಳ ಪ್ರಕಾರ ಶಾಲೆಗಳಲ್ಲಿ ತೀವ್ರವಾದ ಕೊರತೆಯನ್ನು ನಿಭಾಯಿಸಲು "ಶಿಕ್ಷಾ ದೂತ, ಅತಿಥಿ ಶಿಕ್ಷಕರ್, ಶಿಕ್ಷಕ ಸಾರಥಿ, ಶಿಕ್ಷಕ ಸೇವಕ"ರ ಬೆಂಬಲ, ಸಹಕಾರದಿಂದ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲಾಗಿದೆ. 1588 ಸರ್ಕಾರಿ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, 227 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದ ಪರಿಸ್ಥಿತಿ ಇದೆ. 

ಶಿಕ್ಷಣತಜ್ಞ ಜವಾಹರ್ ಸುರೆಸೆಟ್ಟಿ ಅಲಕ್ಷ್ಯದಿಂದ ಕೂಡಿರುವ ಆಡಳಿತದ ಪರಿಣಾಮವಾಗಿ ಪ್ರಾಂತ್ಯದಲ್ಲಿ ಶಿಕ್ಷಣದ ಸುಧಾರಣೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಆಡಳಿತ ಬಿಗಿಯಾಗದೇ ಇದ್ದರೆ ಶಿಕ್ಷಣ ಕ್ಷೇತ್ರ ಬಳಲುವುದು" ಖಚಿತ ಎಂದು ಹೇಳಿದ್ದಾರೆ.

ಈ ಪ್ರಾಂತ್ಯಕ್ಕೆ ನೇಮಕವಾಗುವ ಶಿಕ್ಷಕರು ಹೆಚ್ಚು ಸಮಯ ಇಲ್ಲಿರಲು ಬಯಸುವುದಿಲ್ಲ, ಕಡ್ಡಾಯ ಸೇವಾ ಅವಧಿಯ 3 ವರ್ಷಗಳು ಪೂರ್ಣಗೊಳ್ಳುತ್ತಿದ್ದಂತೆಯೇ ಸಾಧ್ಯವಾದಷ್ಟೂ ಬೇಗ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಪರಿಣಾಮ ಶಿಕ್ಷಕರ ಹುದ್ದೆಗಳು ಖಾಲಿಬಿದ್ದಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಾ ದೂತ, ಅತಿಥಿ ಶಿಕ್ಷಕರ್, ಶಿಕ್ಷಕ ಸಾರಥಿ, ಶಿಕ್ಷಕ ಸೇವಕ"ರ ಬೆಂಬಲ, ಸಹಕಾರದಿಂದ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲಾಗುತ್ತದೆ ಹಾಗೂ ಅವರ ವಿದ್ಯಾರ್ಹತೆಗೆ ತಕ್ಕಂತೆ ಜಿಲ್ಲಾ ಮಿನರಲ್ ಫೌಂಡೇಶನ್ ನಿಂದ (ಫಂಡ್) ವೇತನ ನೀಡಲಾಗುತ್ತದೆ ಎಂದು ಭಾರತಿ ಪ್ರಧಾನ್ (ಬಸ್ತಾರ್ ಪ್ರಾಂತ್ಯದ ಶಾಲಾ ಶಿಕ್ಷಣ ಜಂಟಿ ನಿರ್ದೇಶಕ) ಹೇಳಿದ್ದಾರೆ. 

ಮಾವೋವಾದಿ ಪೀಡಿತ 7 ಜಿಲ್ಲೆ-ಕಂಕೇರ್, ಜಗದಲ್ಪುರ, ಕೊಂಡಗಾಂವ್, ನಾರಾಯಣಪುರ, ಬಿಜಾಪುರ, ದಂತೇವಾಡ ಮತ್ತು ಬಸ್ತರ್ ನ ಸುಕ್ಮಾ ಗಳಲ್ಲಿನ 16500 ಶಾಲೆಗಳಿವೆ. ಸರ್ಕಾರ 14588 ಹೊಸ ಶಿಕ್ಷಕರನ್ನು ನೇಮಕ ಮಾಡಲು ಆದೇಶ ನೀಡಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಲೋಕ್ ಶುಕ್ಲಾ ಹೇಳಿದ್ದಾರೆ. 

SCROLL FOR NEXT