ದೇಶ

ದೇಶದಲ್ಲಿ ಸುಮಾರು 49 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿಕೆ- ಕೇಂದ್ರ ಆರೋಗ್ಯ ಸಚಿವಾಲಯ

Nagaraja AB

ನವದೆಹಲಿ: ದೇಶದಲ್ಲಿ ಒಟ್ಟು 49 ಕೋಟಿ ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ. ಸಂಜೆ 7ರ ತಾತ್ಕಾಲಿಕ ವರದಿಯೊಂದರ ಪ್ರಕಾರ, ಗುರುವಾರ 50.29 ಲಕ್ಷಕ್ಕೂ ಹೆಚ್ಚು (50,29,573)  ಡೋಸ್ ಲಸಿಕೆ ನೀಡಲಾಗಿದೆ. 

ಗುರುವಾರ 18 ರಿಂದ 44 ವರ್ಷದೊಳಗಿನ 27 ಲಕ್ಷದ 26 ಸಾವಿರದ 494 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 4 ಲಕ್ಷದ 81 ಸಾವಿರದ 823 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. ಇದರೊಂದಿಗೆ ದೇಶಾದ್ಯಂತ ಮೂರನೇ ಹಂತದ ಲಸಿಕಾ ಅಭಿಯಾನ ಆರಂಭವಾದಾಗಿನಿಂದಲೂ 18 ರಿಂದ 44 ವರ್ಷ ವಯಸ್ಸಿನ ಒಟ್ಟು 16, 92,68,754 ಜನರು ಮೊದಲ ಡೋಸ್ ಪಡೆದಿದ್ದರೆ, 1,07,72,537 ಜನರು ಎರಡನೇ ಡೋಸ್ ಪಡೆದುಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. 

ಮಧ್ಯ ಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ 18-44 ವಯೋಮಿತಿಯ ಫಲಾನುಭವಿಗಳಿಗೆ ತಲಾ ಒಂದು ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಆಂಧ್ರ ಪ್ರದೇಶ, ಅಸ್ಸಾಂ, ಛತ್ತೀಸ್ ಗಢ, ದೆಹಲಿ, ಹರಿಯಾಣ, ಜಾರ್ಖಂಡ್, ಕೇರಳ, ತೆಲಂಗಾಣ, ಹಿಮಾಚಲ ಪ್ರದೇಶ, ಒಡಿಶಾ, ಪಂಜಾಬ್, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದಲ್ಲಿ  18ರಿಂದ 44 ವಯಸ್ಸಿನೊಳಗಿನ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 

ಲಸಿಕೆ ನೀಡಿಕೆಯ 202ನೇ ದಿನವಾದ ಆಗಸ್ಟ್ 5 ರಂದು 50,29,573 ಡೋಸ್ ಲಸಿಕೆ ನೀಡಲಾಗಿದೆ. ಈ ಪೈಕಿ 37,13,231 ಫಲಾನುಭವಿಗಳು ಮೊದಲ ಡೋಸ್ ಪಡೆದಿದ್ದರೆ, 13,16,342 ಫಲಾನುಭವಿಗಳು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

SCROLL FOR NEXT