ನವದೆಹಲಿ: ಕೋವಿಡ್ -19 ವಿರುದ್ಧ ಲಸಿಕೆ ಹಾಕಿಸಿಕೊಂಡ ನಾಗರಿಕರು ತಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಸೆಕೆಂಡುಗಳಲ್ಲಿ ವಾಟ್ಸಾಪ್ ಮೂಲಕ ಪಡೆಯಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪ್ರಸ್ತುತ, ಜನರು ಕೋವಿನ್ ಪೋರ್ಟಲ್‌ಗೆ ಲಾಗ್ ಇನ್ ಮಾಡುವ ಮೂಲಕ ತಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ.
ತಂತ್ರಜ್ಞಾನದ ಮೂಲಕ ಜನಸಾಮಾನ್ಯರನ್ನು ಸುಲಭವಾಗಿ ತಲುಪುವ ಕ್ರಮಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಈಗ ಮೂರು ಹಂತಗಳನ್ನು ಬಳಸಿ ಸುಲಭವಾಗಿ ಲಸಿಕೆ ಪ್ರಮಾಣ ಪತ್ರ ಪಡೆಯಬಹುದಾಗಿದೆ.
ಮೊದಲಿಗೆ ಈ +91 9013151515 ಸಂಖ್ಯೆಯನ್ನು ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಿ. ನಂತರ ವಾಟ್ಸಾಪ್ ನಲ್ಲಿ 'covid certificate' ಎಂದು ಟೈಪ್ ಮಾಡಿ ಕಳುಹಿಸಿ. OTP ನಮೂದಿಸಿ. ನಿಮ್ಮ ಪ್ರಮಾಣಪತ್ರವನ್ನು ಸೆಕೆಂಡುಗಳಲ್ಲಿ ಪಡೆಯಿರಿ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯವರ ಕಚೇರಿ ಟ್ವೀಟ್ ಮಾಡಿದೆ.
ಒಟ್ಟಾರೆಯಾಗಿ, 50,68,10,492 ಕೋವಿಡ್ ಲಸಿಕೆ ಡೋಸ್‌ಗಳನ್ನು 58,51,292 ಸೆಷನ್‌ಗಳ ಮೂಲಕ ದೇಶದಲ್ಲಿ ನೀಡಲಾಗಿದೆ. ತಾತ್ಕಾಲಿಕ ವರದಿಯ ಪ್ರಕಾರ ಭಾನುವಾರ ಬೆಳಿಗ್ಗೆ 7 ಗಂಟೆಯವರೆಗೆ, ಒಂದು ದಿನದಲ್ಲಿ 55,91,657 ಡೋಸ್‌ಗಳನ್ನು ನೀಡಲಾಗಿದೆ.
ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕುವ ಮೂಲಕ ಜನವರಿ 16ರಂದು ದೇಶದಾದ್ಯಂತ ಲಸಿಕೆ ಹಾಕುವಿಕೆಯನ್ನು ಆರಂಭಿಸಲಾಯಿತು. ಫೆಬ್ರವರಿ 2ರಿಂದ ಮುಂಚೂಣಿ ಕಾರ್ಮಿಕರಿಗೆ ಲಸಿಕೆ ನೀಡುವ ಅಭಿಯಾನ ಆರಂಭವಾಯಿತು.