ದೇಶ

ವಿದೇಶಿ ಪ್ರಜೆಗಳು ಈಗ ಭಾರತದಲ್ಲಿ ಕೋವಿಡ್ ಲಸಿಕೆ ಪಡೆಯಲು ಅರ್ಹರು: ಕೇಂದ್ರ

Vishwanath S

ನವದೆಹಲಿ: ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳು ಕೊವಿನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು ಕೋವಿಡ್ ಲಸಿಕೆ ಪಡೆಯಲು ಅರ್ಹರು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 

ಕೊರೋನಾ ಲಸಿಕೆ ಪಡೆಯುವ ಸಲುವಾಗಿ ವಿದೇಶಿಗರು ತಮ್ಮ ಪಾಸ್ಪೋರ್ಟ್ ಅನ್ನು ಗುರುತಿನ ದಾಖಲೆಯಾಗಿ ಕೋವಿನ್ ಪೋರ್ಟಲ್‌ನಲ್ಲಿ ನೋಂದಾಯಿಕೊಳ್ಳಲು ಬಳಸಬಹುದು ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡ ನಂತರ ವಿದೇಶಿ ಪ್ರಜೆಗಳು ಲಸಿಕೆಗಾಗಿ ಸ್ಲಾಟ್ ಪಡೆಯುತ್ತಾರೆ. ಗಮನಾರ್ಹ ಸಂಖ್ಯೆಯ ವಿದೇಶಿ ಪ್ರಜೆಗಳು ಭಾರತದ ದೊಡ್ಡ ಮಹಾನಗರಗಳಲ್ಲಿ ವಾಸಿಸುತ್ತಿದ್ದಾರೆ. 

ಈ ಮಹಾನಗರಗಳಲ್ಲಿ ಹೆಚ್ಚಿನ ಜನಸಂಖ್ಯಾ ಸಾಂದ್ರತೆಯಿಂದಾಗಿ ಕೊರೋನಾ ಹರಡುವ ಸಾಧ್ಯತೆ ಹೆಚ್ಚಾಗಿದೆ. ಅಂತಹ ಯಾವುದೇ ಸಂಭವನೀಯತೆಯನ್ನು ಎದುರಿಸಲು, ಎಲ್ಲಾ ಅರ್ಹ ವ್ಯಕ್ತಿಗಳಿಗೆ ಲಸಿಕೆ ಹಾಕುವುದು ಮುಖ್ಯವಾಗಿದೆ ಎಂದು ಕೇಂದ್ರ ಹೇಳಿದೆ.

ಕೊರೋನಾ ನಿಂದ ರಕ್ಷಿಸಿಕೊಳ್ಳುವ ಹೆಗ್ಗುರುತಿನ ಉಪಕ್ರಮದಲ್ಲಿ ಆರೋಗ್ಯ ಸಚಿವಾಲಯವು ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳು ಕೋವಿಡ್ 19 ಲಸಿಕೆ ತೆಗೆದುಕೊಳ್ಳಲು ಕೊವಿನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ನೀಡುವ ನಿರ್ಧಾರ ಕೈಗೊಂಡಿದೆ.

ಕೋವಿಡ್ -19 ಲಸಿಕೆ ಕಾರ್ಯಕ್ರಮವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2021ರ ಜನವರಿ 16ರಿಂದ ಜಾರಿಗೆ ತರಲಾಗಿತ್ತು. ಪ್ರಸ್ತುತ ಹಂತದಲ್ಲಿ ವ್ಯಾಕ್ಸಿನೇಷನ್ ಕಾರ್ಯಕ್ರಮವು 18 ವರ್ಷ ಮತ್ತು ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಲಸಿಕೆ ನೀಡಲಾಗುತ್ತಿದೆ.

SCROLL FOR NEXT