ದೇಶ

ಕಳೆದ ಏಳು ದಿನಗಳಲ್ಲಿ ದೇಶದ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಅರ್ಧಕ್ಕೂ ಹೆಚ್ಚು ಕೇರಳದಿಂದ ವರದಿ: ಕೇಂದ್ರ ಸರ್ಕಾರ

Nagaraja AB

ನವದೆಹಲಿ: ಕಳೆದ ಏಳು ದಿನಗಳಲ್ಲಿ ದೇಶದಲ್ಲಿನ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಅರ್ಧಕ್ಕೂ ಹೆಚ್ಚು ಪ್ರಕರಣಗಳು ಕೇರಳದಿಂದ ವರದಿಯಾಗಿರುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.

ಕೇರಳದ 11 ಜಿಲ್ಲೆಗಳು, ತಮಿಳುನಾಡಿನ 7 ಜಿಲ್ಲೆಗಳು ಸೇರಿದಂತೆ 9 ರಾಜ್ಯಗಳ 37 ಜಿಲ್ಲೆಗಳಲ್ಲಿ ಕಳೆದ ಎರಡು ವಾರಗಳಲ್ಲಿ ಕೋವಿಡ್-19 ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯ ಪ್ರವೃತ್ತಿಯಿದೆ. 11 ರಾಜ್ಯಗಳ 44 ಜಿಲ್ಲೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಪ್ತಾಹಿಕ ಪಾಸಿಟಿವಿಟಿ ದರ ಶೇ.10ಕ್ಕೂ ಹೆಚ್ಚಾಗಿದೆ ಎಂದು ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.  ಕಳೆದ ಏಳು ದಿನಗಳ ಅವಧಿಯಲ್ಲಿ ಕೇರಳದಲ್ಲಿ ಒಟ್ಟು ಶೇ.51.51 ರಷ್ಟು ಕೋವಿಡ್-19 ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರದ ಪ್ರಕಾರ, ಹಿಮಾಚಲ ಪ್ರದೇಶ, ಪಂಜಾಬ್, ಗುಜರಾತ್, ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ ಕೋವಿಡ್-19 ಸೋಂಕು ಹರಡುವಿಕೆ ಶೇ.1ಕ್ಕಿಂತಲೂ ಹೆಚ್ಚಾಗಿದೆ. ಕೆಲವು ರಾಜ್ಯಗಳಲ್ಲಿ  ಸೋಂಕು ಹೆಚ್ಚಳ ಪ್ರವೃತ್ತಿ ಆತಂಕಕ್ಕೆ ಕಾರಣವಾಗಿದೆ. ಆದಾಗ್ಯೂ, ದೇಶದಲ್ಲಿ ಕೋವಿಡ್-19 ಪ್ರಕರಣಗಳು ಸ್ಥಿರವಾಗಿದ್ದು, ಗಮನಾರ್ಹ ಕಾರಣಗಳಿಂದ ಸಾಂಕ್ರಾಮಿಕ ನಿಯಂತ್ರಣ ಕ್ರಮವನ್ನು ಹೇರಲಾಗಿದೆ. 

ನಿನ್ನೆ ದಿನ ಮಹಾರಾಷ್ಟ್ರದಲ್ಲಿ 34 ಸೇರಿದಂತೆ ದೇಶದಲ್ಲಿ 86 ಮಾದರಿಗಳಲ್ಲಿ ಸಾರ್ಸ್- ಕೋವ್ -2  ಡೆಲ್ಟಾ ಪ್ಲಸ್ ರೂಪಾಂತರ ಪತ್ತೆಯಾಗಿದೆ. ದೇಶದಲ್ಲಿ 147 ದಿನಗಳಲ್ಲಿ ಅತಿ ಕಡಿಮೆ  28,204 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿನ ಪ್ರಕರಣ ಸಂಖ್ಯೆ 3, 19,98,158ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,88,508ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಪರಿಷ್ಕೃತ ಮಾಹಿತಿ ನೀಡಿದೆ. 373 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 4,28,682ಕ್ಕೆ ಏರಿಕೆಯಾಗಿದೆ. 

SCROLL FOR NEXT