ದೇಶ

ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರ ಗೈರು: ಪ್ರಧಾನಿ ಮೋದಿ ಅಸಮಾಧಾನ

Srinivasamurthy VN

ನವದೆಹಲಿ: ಮುಂಗಾರು ಅಧಿವೇಶನದ ಕೊನೆಯ ವಾರದಲ್ಲಿ ಸಂಸತ್ತು ಕೋಲಾಹಲಕ್ಕೆ ಸಾಕ್ಷಿಯಾಗುತ್ತಿರುವ ಸಂದರ್ಭದಲ್ಲಿಯೇ, ಸೋಮವಾರ ರಾಜ್ಯಸಭೆಗೆ ಹಾಜರಾಗದ ಬಿಜೆಪಿ ಸಂಸದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿ, ಪ್ರತಿಯೊಬ್ಬರೂ ಕಡ್ಡಾಯವಾಗಿ ಹಾಜರಾಗುವಂತೆ ತಿಳಿಸಿದ್ದಾರೆ.

ಮಂಗಳವಾರ ಸಂಸತ್ ಕಲಾಪ ಆರಂಭಕ್ಕೂ ಮುನ್ನ, ಬಿಜೆಪಿ ಸಂಸದೀಯ ಸಭೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೋದಿ, ಒಲಿಂಪಿಕ್ಸ್‌ನಲ್ಲಿ ಭಾರತೀಯ ಆಟಗಾರರ ಕಾರ್ಯಕ್ಷಮತೆಯನ್ನು ಶ್ಲಾಘಿಸಿ, ಎಲ್ಲಾ ಸಂಸದರು ಕ್ರೀಡೆಗಳನ್ನು ಉತ್ತೇಜಿಸುವಂತೆ ಸಲಹೆ ನೀಡಿದ್ದಾರೆ.

ರಾಜ್ಯಸಭೆಯಲ್ಲಿ ನ್ಯಾಯಮಂಡಳಿ ಸುಧಾರಣಾ ವಿಧೇಯಕವನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕೆಂಬ ಪ್ರಸ್ತಾವಕ್ಕೆ 79 ವಿರುದ್ಧ ಹಾಗೂ 44 ಪರವಾಗಿ ಮತ ಚಲಾಯಿಸಲಾಯಿತು. "ನಿನ್ನೆ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರ ಗೈರುಹಾಜರಿಯ ಬಗ್ಗೆ ಪ್ರಧಾನಮಂತ್ರಿ ವೇದನೆ ವ್ಯಕ್ತಪಡಿಸಿದ್ದಾರೆ" ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ಅಪೌಷ್ಟಿಕತೆ ಸಮಸ್ಯೆಯ ಬಗ್ಗೆ ಗಮನಹರಿಸುವಂತೆ ಸಂಸದರಿಗೆ ತಿಳಿಸಿರುವ ಮೋದಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಉತ್ತೇಜಿಸಿದ್ದಾರೆ. ಈ ವಾರ ಕೊನೆಗೊಳ್ಳಲಿರುವ ಮುಂಗಾರು ಅಧಿವೇಶನದಲ್ಲಿ ಉಭಯ ಸದನಗಳ ಸಂಸದರನ್ನು ಒಳಗೊಂಡಿರುವ ಬಿಜೆಪಿಯ ಸಂಸದೀಯ ಪಕ್ಷದ ಕೊನೆಯ ಸಭೆ ಇದಾಗಿದೆ.

ಪೆಗಾಸಸ್ ಸ್ನೂಪಿಂಗ್ ವಿವಾದದ ಬಗ್ಗೆ ಪ್ರತಿಪಕ್ಷಗಳು ಚರ್ಚೆಯನ್ನು ಒತ್ತಾಯಿಸುವುದರಿಂದ ಉಭಯ ಸದನಗಳಲ್ಲಿ ಕಲಾಪ ಭಂಗವಾಗಿದೆ. ಪೆಗಾಸಸ್ ಸ್ಪೈವೇರ್ ಅನ್ನು ಅಭಿವೃದ್ಧಿಪಡಿಸಿದ ಇಸ್ರೇಲಿ ಕಂಪನಿಯಾದ ಎನ್ ಎಸ್ ಒ ಗ್ರೂಪ್ ಟೆಕ್ನಾಲಜೀಸ್ ನೊಂದಿಗೆ ಯಾವುದೇ ವಹಿವಾಟು ನಡೆಸಿಲ್ಲ ಎಂದು ರಕ್ಷಣಾ ಸಚಿವಾಲಯವು ಸೋಮವಾರದ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಸಂಸತ್ತಿಗೆ ತಿಳಿಸಿದೆ.

ಗೈರಾದ ಸದಸ್ಯರ ಪಟ್ಟಿ ನೀಡಿ
ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸದನದಲ್ಲಿ ಗೈರಾದ ಸದಸ್ಯರ ವಿವರಗಳನ್ನು ಸಲ್ಲಿಸುವಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿಗೆ ಹೇಳಿದರು. ಪ್ರತಿಪಕ್ಷಗಳ ನಿರ್ಣಯವನ್ನು ಸೋಲಿಸಿದರೂ, ಆಢಳಿತಾರೂಢ ಸದಸ್ಯರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಗೈರಾದ ಸದಸ್ಯರ ಪಟ್ಟಿ ನೀಡಿ ಎಂದು ಮೋದಿ ಹೇಳಿದರು.
 

SCROLL FOR NEXT