ನವದೆಹಲಿ: ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲಿಲು ಬಸ್ ಮೇಲಿನ ಆತ್ಮಾಹುತಿ ದಾಳಿಯಲ್ಲಿ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಆರೋಪಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಭಯೋತ್ಪಾದನೆಯ ಕೇಂದ್ರಬಿಂದು ಮತ್ತು ಉಗ್ರರ ಸುರಕ್ಷಿತ ಧಾಮವಾಗಿರುವ ಪಾಕಿಸ್ತಾನ ಅಂತಾರಾಷ್ಟ್ರೀಯ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನದಲ್ಲಿ ಭಾರತವನ್ನು ನಿಂದಿಸುವ ಇನ್ನೊಂದು ಪ್ರಯತ್ನವಾಗಿದೆ ಎಂದು ಹೇಳಿದರು.
ತನಿಖೆ ಪೂರ್ಣಗೊಂಡ ನಂತರ ಇಸ್ಲಾಮಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಖುರೇಷಿ ಭಾರತ ಮತ್ತು ಅಫ್ಘಾನಿಸ್ತಾನ ದಾಳಿಯ ಹಿಂದಿದೆ ಎಂದು ಆರೋಪಿಸಿದರು.
"ಅಂತಾರಾಷ್ಟ್ರೀಯ ಸಮುದಾಯದ ಸಹಭಾಗಿತ್ವದಲ್ಲಿ ಭಯೋತ್ಪಾದನೆ ವಿರುದ್ಧದ ಜಾಗತಿಕ ಪ್ರಯತ್ನಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಭಯೋತ್ಪಾದನೆಯ ವಿಷಯ ಬಂದಾಗ ಪಾಕಿಸ್ತಾನದ ಅರ್ಹತೆಗಳ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದು ಬಾಗ್ಚಿ ಹೇಳಿದರು.
ಜುಲೈ 14ರಂದು ನಿರ್ಮಾಣವಾಗುತ್ತಿರುವ ದಾಸು ಅಣೆಕಟ್ಟಿನ ಸ್ಥಳಕ್ಕೆ ಚೀನಾದ ಎಂಜಿನಿಯರ್‌ಗಳು ಮತ್ತು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಸ್ಫೋಟಗೊಂಡು ಕನಿಷ್ಠ 13 ಜನರು ಸಾವನ್ನಪ್ಪಿದ್ದರು. ಸ್ಫೋಟದ ನಂತರ ಬಸ್ ಆಳವಾದ ಕಮರಿಗೆ ಉರುಳಿತ್ತು.