ದೇಶ

ಕಾಶ್ಮೀರ: ಕುಲ್ಗಾಮ್ ನಲ್ಲಿ ಬಿಜೆಪಿ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಉಗ್ರರು 

Lingaraj Badiger

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಮಂಗಳವಾರ ಬಿಜೆಪಿ ನಾಯಕರೊಬ್ಬರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಸಂಜೆ 4.30ರ ಸುಮಾರಿಗೆ ದಕ್ಷಿಣ ಕಾಶ್ಮೀರ ಜಿಲ್ಲೆಯ ಬ್ರಶ್ಲೂ ಜಾಗೀರ್ ಪ್ರದೇಶದಲ್ಲಿ ಜಾವೀದ್ ಅಹ್ಮದ್ ದಾರ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. 

ಹೋಮ್ಶಾಲಿಬಾಗ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾಗಿದ್ದ ದಾರ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದಿದ್ದು, ಉಗ್ರರನ್ನು ಹಿಡಿಯಲು ತೀವ್ರ ಶೋಧ ಆರಂಭಿಸಲಾಗಿದೆ ಎಂದು ಅಧಿಕಾರಿಗಳು
ತಿಳಿಸಿದ್ದಾರೆ.

ಏತನ್ಮಧ್ಯೆ, ಈ ದಾಳಿಯನ್ನು ವಿವಿಧ ರಾಜಕೀಯ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಭಾರತೀಯ ಜನತಾ ಪಕ್ಷದ ಜಮ್ಮು
ಮತ್ತು ಕಾಶ್ಮೀರದ ವಕ್ತಾರ ಅಲ್ತಾಫ್ ಠಾಕೂರ್ ಈ ಹತ್ಯೆಯನ್ನು ಖಂಡಿಸಿದ್ದು, ಇದು ಹೇಡಿತನ ಮತ್ತು ಅನಾಗರಿಕ ಕೃತ್ಯ ಎಂದು ಹೇಳಿದ್ದಾರೆ.

"ಉಗ್ರರು ನಿರಾಶೆಗೊಂಡಿದ್ದಾರೆ ಮತ್ತು ಅಮಾಯಕರನ್ನು ಗುರಿಯಾಗಿಸಿಕೊಂಡಿದ್ದಾರೆ. ನಿರಾಯುಧರನ್ನು ಕೊಲ್ಲುವುದು ಯಾವುದಕ್ಕೂ
ಉತ್ತರವಲ್ಲ. ಇದು ಹೇಡಿತನ ಮತ್ತು ಅನಾಗರಿಕ ಕೃತ್ಯ" ಎಂದ ಅವರು, ಉಗ್ರರನ್ನು ಹಿಡಿದು ಕಠಿಣ ಶಿಕ್ಷೆ ನೀಡುವಂತೆ
ಪೊಲೀಸರಿಗೆ ಮನವಿ ಮಾಡಿದ್ದಾರೆ.

SCROLL FOR NEXT