ದೇಶ

ಅಫ್ಘಾನಿಸ್ತಾನ ವಿಚಾರದಲ್ಲಿ ಬೈಡನ್ ವಿದೇಶಾಂಗ ನೀತಿ ಒಪ್ಪಲಾಗದು: ಒಮರ್ ಅಬ್ದುಲ್ಲಾ

Srinivasamurthy VN

ಶ್ರೀನಗರ: ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾದ ನಂತರ ಅಲ್ಲಿನ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದ್ದು, ಸೇನೆ ವಾಪಸ್ ಕರೆಸಿಕೊಂಡ ಅಮೆರಿಕದ ಬಗ್ಗೆ ಹಲವು ನಾಯಕರಿಂದ ಟೀಕೆ ವ್ಯಕ್ತವಾಗಿದೆ.

ತಾಲಿಬಾನಿಗಳನ್ನು ಹತ್ತಿಕ್ಕಲು ಸ್ವತಃ ಅಫ್ಘಾನಿಸ್ತಾನ ಸೇನೆಯೇ ಹಿಂಜರಿದ ಕಾರಣ, ರಕ್ತಪಾತದಲ್ಲಿ ಅಮೆರಿಕನ್ನರು ಬಲಿಯಾಗಬಾರದು ಎಂಬ ಉದ್ದೇಶದಿಂದ ಸೇನೆಯನ್ನು ವಾಪಸ್ ಕರೆಸಿಕೊಂಡಿದ್ದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸ್ಪಷ್ಟನೆ ನೀಡಿದ್ದರು.

ಆದಾಗ್ಯೂ, ಅಫ್ಘಾನಿಸ್ತಾನದಿಂದ ಹೊರಬರಲು ಅಮೆರಿಕ ಅನುಸರಿಸಿದ ವಿದೇಶಾಂಗ ನೀತಿ ಸೂಕ್ತವಲ್ಲ. ದೇಶ ಬಿಟ್ಟು ಹೊರಬರುವ ಮಾರ್ಗ ಇದಲ್ಲ ಎಂದು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

'ಬೈಡನ್ ಅನುಸರಿಸಿದ ಕ್ರಮದಿಂದಾಗಿ ತಲೆದೋರಿರುವ ಬಿಕ್ಕಟ್ಟಿಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಥವಾ ಬೇರೆಯವರನ್ನು ದೂಷಿಸಲು ಸಾಧ್ಯವಿಲ್ಲ. ಅಮೆರಿಕ ಅಧ್ಯಕ್ಷರಾಗಿ ನೀವು ನಿರ್ವಾತವನ್ನು ಸೃಷ್ಟಿಸಿದ್ದೀರಿ. ಅಫ್ಘಾನಿಸ್ತಾನದಿಂದ ನಿರ್ಗಮಿಸಿದ್ದಕ್ಕಾಗಿ ಅಮೆರಿಕವನ್ನು ದ್ವೇಷಿಸುವುದಿಲ್ಲ ಆದರೆ ಇದು  ಬಿಟ್ಟು ಹೋಗುವ ಮಾರ್ಗವಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಹಿಡಿಯುತ್ತಿರುವ ಕಾರಣ, ಬೆದರಿರುವ ಬಹುತೇಕ ನಾಗರಿಕರು ದೇಶ ತೊರೆಯುತ್ತಿದ್ದಾರೆ. ಕಾಬೂಲ ವಿಮಾನ ನಿಲ್ದಾಣದಲ್ಲಿ ಜನರು ವಿಮಾನವನ್ನು ಹಿಡಿಯಲು ಓಡುತ್ತಿರುವ ದೃಶ್ಯ, ನುಕುನುಗ್ಗಲಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಮತ್ತೊಂದು  ವೀಡಿಯೋದಲ್ಲಿ, ಟೇಕ್ ಆಫ್ ಆದ ವಿಮಾನದಿಂದ ಇಬ್ಬರು ಕೆಳಗೆ ಬೀಳುತ್ತಿರುವುದು ಕಂಡುಬಂದಿದೆ. ತಾಲಿಬಾನ್ ಅಧಿಕಾರ ವಹಿಸಿಕೊಂಡಿದ್ದರಿಂದ ದೇಶವನ್ನು ತೊರೆಯಲು ಸಾವಿರಾರು ಅಫ್ಘಾನ್ ಪ್ರಜೆಗಳು ಕಾಬೂಲ್‌ನ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಮಾಯಿಸಿದ್ದಾರೆ.
 

SCROLL FOR NEXT