ದೇಶ

ಸುಪ್ರೀಂ ಕೋರ್ಟ್ ನ ಮೊಟ್ಟಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಕರ್ನಾಟಕದ ಬಿವಿ ನಾಗರತ್ನ ನೇಮಕ ಸಾಧ್ಯತೆ!

Shilpa D

ನವದೆಹಲಿ: ಭಾರತದ ಸುಪ್ರೀಂ ಕೋರ್ಟ್‌ 2027ರಲ್ಲಿ ಮೊದಲ ಬಾರಿಗೆ ಮಹಿಳಾ ಮುಖ್ಯ ನ್ಯಾಯಮೂರ್ತಿಯನ್ನು ಕಾಣಲಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಭಾರತದ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ. 

ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ, ನ್ಯಾಯಮೂರ್ತಿಗಳ ನೇಮಕಕ್ಕಾಗಿ ಒಟ್ಟು ಒಂಬತ್ತು ಜನರ ಹೆಸರನ್ನು ಮಂಗಳವಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಸುಪ್ರೀಂಕೋರ್ಟ್‌ನ ಇತಿಹಾಸದಲ್ಲಿಯೇ ಈವರೆಗೂ ಯಾವುದೇ ಮಹಿಳಾ ನ್ಯಾಯಮೂರ್ತಿ ಈ ಅತ್ಯುನ್ನತ ಹುದ್ದೆಗೆ ಏರಿರಲಿಲ್ಲ. ಈ ಚರಿತ್ರೆ ಕರ್ನಾಟಕದಿಂದ ಸೃಷ್ಟಿಯಾಗುತ್ತಿರುವುದು ವಿಶೇಷ.

ಆದರೆ ಇದು ಕೇಂದ್ರ ಸರ್ಕಾರದ ತೀರ್ಮಾನವನ್ನು ಅವಲಂಬಿಸಿದೆ. ಹಾಲಿ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ, ಒಂಬತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ಪದೋನ್ನತಿಗೆ ಶಿಫಾರಸು ಮಾಡಿದೆ. ಇದರಲ್ಲಿ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯಾಗಿರುವ ಬಿವಿ ನಾಗರತ್ನ ಅವರೂ ಇದ್ದಾರೆ.

ನ್ಯಾಯಮೂರ್ತಿಗಳಾದ ಹಿಮಾ ಕೋಹಿ ಮತ್ತು ಬೆಲಾ ತ್ರಿವೇದಿ ಶಿಫಾರಸು ಮಾಡಲಾದ ಪಟ್ಟಿಯಲ್ಲಿ ಇರುವ ಇತರೆ ಇಬ್ಬರು ಮಹಿಳೆಯರಾಗಿದ್ದಾರೆ.

ಈ ಹಿಂದಿನ ಸಿಜೆಐ ಎಸ್‌ಎ ಬೋಬ್ಡೆ ಅವರು ನಿವೃತ್ತರಾಗುವ ವೇಳೆಯಲ್ಲಿ, 'ಭಾರತವು ಮಹಿಳಾ ಮುಖ್ಯ ನ್ಯಾಯಮೂರ್ತಿಯನ್ನು ಹೊಂದುವ ಸಮಯ ಬಂದಿದೆ' ಎಂದಿದ್ದರು.

1962ರಲ್ಲಿ ಜನಿಸಿದ ನ್ಯಾಯಮೂರ್ತಿ ನಾಗರತ್ನ ಅವರು 1987ರ ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ವಕೀಲರಾಗಿ ವೃತ್ತಿ ಬದುಕು ಆರಂಭಿಸಿದ್ದರು. 2008ರ ಫೆಬ್ರವರಿಯಲ್ಲಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾದರು. 2010ರ ಫೆಬ್ರವರಿಯಲ್ಲಿ ಅವರು ಕಾಯಂ ನ್ಯಾಯಮೂರ್ತಿಯಾದರು.

SCROLL FOR NEXT