ದೇಶ

ಪೈಲಟ್ ಬಣಕ್ಕೆ 6 ಸಚಿವ ಸ್ಥಾನ ಬೇಡಿಕೆ ತಿರಸ್ಕರಿಸಿದ ಸಿಎಂ ಗೆಹ್ಲೋಟ್, ರಾಜಸ್ಥಾನ ಸಂಪುಟ ಪುನಾರಚನೆಗೆ ಬ್ರೇಕ್

Lingaraj Badiger

ಜೈಪುರ: ರಾಜಸ್ಥಾನದ ಬಹುಕಾಲದ ಬೇಡಿಕೆಗಳಾದ ಸಚಿವ ಸಂಪುಟ ಪುನಾರಚನೆ ಮತ್ತು ರಾಜಕೀಯ ನೇಮಕಾತಿಗಳು ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸಿಎಂ ಅಶೋಕ್ ಗೆಹ್ಲೋಟ್ ಅವರ ಸಂಪುಟ ಪುನಾರಚನೆ ಅಗಸ್ಟ್ 15 ರ ವೇಳೆಗೆ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸಚಿನ್ ಪೈಲಟ್ ಕ್ಯಾಂಪ್ ಗೆ ಆರು ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆಯನ್ನು ಸಿಎಂ ತಿರಸ್ಕರಿಸಿದ್ದು, ಸಂಪುಟ ಪುನಾರಚನೆಯನ್ನು ಮತ್ತೆ ತಡೆ ಹಿಡಿಯಲಾಗಿದೆ.

ರಾಜ್ಯ ಘಟಕದಲ್ಲಿ 'ಎಲ್ಲವೂ ಚೆನ್ನಾಗಿದೆ' ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿದ್ದರೂ, ಸಚಿವ ಸಂಪುಟ ಪುನಾರಚನೆಯು ಪಕ್ಷಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಮೂಲಗಳ ಪ್ರಕಾರ ಪೈಲಟ್ ಬಣದಿಂದ ಆರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೇಳಲಾಗಿದೆ. ಕಳೆದ ವರ್ಷ ಪೈಲಟ್ ನೇತೃತ್ವದ ದಂಗೆಯ ಸಮಯದಲ್ಲಿ ಉಚ್ಚಾಟನೆಗೊಂಡ ಮೂವರು ಸಚಿವರಲ್ಲದೆ, ಸಚಿನ್ ಪೈಲಟ್ ತಮ್ಮ ನಿಷ್ಠಾವಂತ ಶಾಸಕರಿಗೆ ಒಟ್ಟು ಆರು ಸಚಿವ ಸ್ಥಾನಗಳನ್ನು ಕೇಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ಸಿಎಂ ಗೆಹ್ಲೋಟ್ ಅವರು ಪೈಲಟ್ ಬಣಕ್ಕೆ ಆರು ಸಚಿವ ಸ್ಥಾನ ನೀಡಲು ಸಿದ್ಧವಿಲ್ಲ. ಪೈಲಟ್ ಲಾಬಿಗೆ ಕೇವಲ ಮೂರು ಸಚಿವ ಸ್ಥಾನ ನೀಡಲು ಸಿಎಂ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಬಂಡಾಯದ ನಂತರ ಪೈಲಟ್ ಮತ್ತು ಅವರ 18 ನಿಷ್ಠಾವಂತ ಶಾಸಕರು ಹರಿಯಾಣದಲ್ಲಿ ಸುಮಾರು ಒಂದು ತಿಂಗಳು ತಂಗಿದ್ದರು, ರಾಜಸ್ಥಾನದಲ್ಲಿ ರಾಜಕೀಯ ಅನಿಶ್ಚಿತತೆ ಮುಂದುವರಿದಿದೆ. ದೊಡ್ಡ ಬಿಕ್ಕಟ್ಟನ್ನು ಗಮನಿಸಿದರೆ, ಕಾಂಗ್ರೆಸ್ ಹೈಕಮಾಂಡ್ ಕೂಡ ಗೆಹ್ಲೋಟ್-ಪೈಲಟ್ ಬಣಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಯತ್ನಿಸುತ್ತಿದೆ. 

SCROLL FOR NEXT