ದೇಶ

ಇಂಗ್ಲೀಷ್ ನಲ್ಲೇ ಪ್ರತಿಕ್ರಿಯೆ ನೀಡಿ: ತಮಿಳುನಾಡು ಸಂಸದರಿಗೆ ಹಿಂದಿಯಲ್ಲಿ ಪತ್ರ ಬರೆದಿದ್ದ ಕೇಂದ್ರಕ್ಕೆ ಹೈಕೋರ್ಟ್ ಆದೇಶ

Srinivas Rao BV

ನವದೆಹಲಿ: ರಾಜ್ಯಗಳಿಗೆ ಸಂಬಂಧಿಸಿದ ಅಧಿಕಾರಿಗಳು, ಜನತೆ, ಸಂಸದರು, ಜನಪ್ರತಿನಿಧಿಗಳು ಯಾವ ಭಾಷೆಯಲ್ಲಿ ಕೇಂದ್ರಕ್ಕೆ ಪತ್ರ ಬರೆಯುತ್ತಾರೋ ಅದೇ ಭಾಷೆಯಲ್ಲಿ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಬೇಕು ಎಂದು ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠ ಮಹತ್ವದ ಆದೇಶ ನೀಡಿದೆ.

"ಕೇಂದ್ರ ಸರ್ಕಾರ ಭಾರತದ ಅಧಿಕೃತ ಭಾಷೆಗಳ ಕಾಯ್ದೆ, 1963 ನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಒಮ್ಮೆ ಯಾವುದೇ ಜನಪ್ರತಿನಿಧಿ ಇಂಗ್ಲೀಷ್ ನಲ್ಲಿ ಪತ್ರವನ್ನು ಬರೆದರೆ ಅದಕ್ಕೆ ಇಂಗ್ಲೀಷ್ ನಲ್ಲಿಯೇ ಪ್ರತಿಕ್ರಿಯೆ ನೀಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿರುತ್ತದೆ" ಎಂದು ನ್ಯಾಯಪೀಠ ಹೇಳಿದೆ.

ನ್ಯಾ. ಎನ್ ಕೃಬಾಕರನ್ ಹಾಗೂ ಎಂ ದುರೈ ಸ್ವಾಮಿ ಅವರಿದ್ದ ವಿಭಾಗೀಯ ಪೀಠ, ಮಧುರೈ ನ ಸಂಸದ ಸು.ವೆಂಕಟೇಶನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಸರ್ಕಾರಕ್ಕೆ ಈ ಮೇಲಿನ ನಿರ್ದೇಶನ ನೀಡಿದೆ.

ರಾಜ್ಯ ಸರ್ಕಾರ, ಅದರ ಸಂಸದರು, ಜನಸಾಮಾನ್ಯರೊಂದಿಗಿನ ಸಂವಹನಗಳಲ್ಲಿ ಇಂಗ್ಲೀಷ್ ನ್ನು ಮಾತ್ರ ಬಳಕೆ ಮಾಡಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದರು.

ತಮಿಳುನಾಡು ಹಾಗೂ ಪಾಂಡಿಚರಿಗಳಲ್ಲಿ ಸಿಆರ್ ಪಿಎಫ್ ಅರೆ ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲು ವೆಂಕಟೇಶನ್ ಅವರು ಮನವಿ ಮಾಡಿ ಬರೆದಿದ್ದ ಪತ್ರಕ್ಕೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರು ಹಿಂದಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು.

"ಕೋರ್ಟ್ ಈ ಪ್ರಕರಣದಲ್ಲಿ ಸಂವಿಧಾನದ ಆರ್ಟಿಕಲ್ 350 ಯನ್ನು ಉಲ್ಲೇಖಿಸಿ ಕೇಂದ್ರ ಅಥವಾ ರಾಜ್ಯಗಳಲ್ಲಿ ಬಳಕೆ ಮಾಡುವ ಯಾವುದೇ ಭಾಷೆಯಲ್ಲಿಯೂ ಯಾವುದೇ ವ್ಯಕ್ತಿ ನಿರೂಪಣೆ ಮಾಡಬಹುದಾಗಿದೆ. ಆದ್ದರಿಂದ ಒಮ್ಮೆ ಇಂಗ್ಲೀಷ್ ನಲ್ಲಿ ಪತ್ರ ನಿರೂಪಣೆ ಮಾಡಿದರೆ ಕೇಂದ್ರ ಸರ್ಕಾರ ಅದಕ್ಕೆ ಇಂಗ್ಲೀಷ್ ನಲ್ಲಿಯೇ ಉತ್ತರಿಸಬೇಕು, ಇದು ಅಧಿಕೃತ ಭಾಷೆಗಳ ಕಾಯ್ದೆಗೂ ಸಮ್ಮತವಾಗಿದೆ" ಎಂದು ನ್ಯಾಯಪೀಠ ಹೇಳಿದೆ. 

ಇದೇ ವೇಳೆ "ಹಿಂದಿಯೊಂದರಲ್ಲೇ ಉತ್ತರ ನೀಡಿರುವುದು ಪ್ರಮಾದವಶಾತ್ ಘಟಿಸಿದೆ ಎಂಬ ಕೇಂದ್ರ ಸರ್ಕಾರದ ವಿವರಣೆಯನ್ನೂ ಕೋರ್ಟ್ ಪರಿಗಣಿಸಿದ್ದು 1963 ರ ಅಧಿಕೃತ ಭಾಷಾ ಕಾಯ್ದೆಯನ್ನು ಅದರಲ್ಲಿಯೂ ಪ್ರಮುಖವಾಗಿ ಸೆಕ್ಷನ್ 3 ನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕೆಂದು ಸೂಚನೆ ನೀಡಿದೆ.

SCROLL FOR NEXT