ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿರುವ ಕಲ್ಯಾಣ್ ಸಿಂಗ್ 
ದೇಶ

ಕಲ್ಯಾಣ್ ಸಿಂಗ್: ಹಿಂದುತ್ವದ ಐಕಾನ್, 1992 ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದಾಗ ಆಡಳಿತದ ಹೊಣೆ ಹೊತ್ತಿದ್ದ ನಾಯಕ

ಉತ್ತರ ಪ್ರದೇಶ ಮಾಜಿ ಸಿಎಂ, ರಾಜಸ್ಥಾನದ ಮಾಜಿ ರಾಜ್ಯಪಾಲ ಕಲ್ಯಾಣ್ ಸಿಂಗ್ ಇಂದು ಇಹಲೋಕ ತ್ಯಜಿಸಿದ್ದಾರೆ. 1992 ರ ಡಿ.06 ರಂದು ನಡೆದ ಬಾಬ್ರಿ ಮಸೀದಿ ಘಟನೆಯ ಬಗ್ಗೆ ಉಲ್ಲೇಖಿಸಿದಾಗಲೆಲ್ಲಾ ತಪ್ಪದೇ ಕಲ್ಯಾಣ್ ಸಿಂಗ್ ಹೆಸರೂ ಉಲ್ಲೇಖವಾಗುತ್ತದೆ.

ಲಖನೌ: ಉತ್ತರ ಪ್ರದೇಶ ಮಾಜಿ ಸಿಎಂ, ರಾಜಸ್ಥಾನದ ಮಾಜಿ ರಾಜ್ಯಪಾಲ ಕಲ್ಯಾಣ್ ಸಿಂಗ್ ಇಂದು ಇಹಲೋಕ ತ್ಯಜಿಸಿದ್ದಾರೆ. 1992 ರ ಡಿ.06 ರಂದು ನಡೆದ ಬಾಬ್ರಿ ಮಸೀದಿ ಘಟನೆಯ ಬಗ್ಗೆ ಉಲ್ಲೇಖಿಸಿದಾಗಲೆಲ್ಲಾ ತಪ್ಪದೇ ಕಲ್ಯಾಣ್ ಸಿಂಗ್ ಹೆಸರೂ ಉಲ್ಲೇಖವಾಗುತ್ತದೆ.

ಕರಸೇವಕರ ಗುಂಪು ಮಸೀದಿಯನ್ನು ಧ್ವಂಸಗೊಳಿಸಿದ ಕೆಲವೇ ಗಂಟೆಗಳಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ರಾಜೀನಾಮೆ ನೀಡಿದ್ದರು. ಅವರು ರಾಜೀನಾಮೆ ನೀಡಿದ್ದು ಮಸೀದಿಯನ್ನು ಧ್ವಂಸಗೊಳ್ಳುವುದರಿಂದ ತಪ್ಪಿಸುವುದಕ್ಕೆ ತಮ್ಮಿಂದ ಸಾಧ್ಯವಾಗಲಿಲ್ಲ ಎಂಬ ವೈಫಲ್ಯದ ವಿಷಾದಕ್ಕೆ ಅಲ್ಲ. ಅವರು ಸುಪ್ರೀಂ ಕೋರ್ಟ್ ಗೆ ಮಸೀದಿಯನ್ನು ರಕ್ಷಿಸುವುದಾಗಿ ಭರವಸೆ ನೀಡಿದ್ದರು.

ವಿವಾದಗಳು ಇತ್ಯರ್ಥಗೊಂಡು 2020 ರಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯುವಾಗ ಪ್ರತಿಕ್ರಿಯೆ ನೀಡಿದ್ದ ಕಲ್ಯಾಣ್ ಸಿಂಗ್, ನಾನು ಮುಖ್ಯಮಂತ್ರಿಯಾಗಿದ್ದಾಗ ಆ ಕಟ್ಟಡ ಧ್ವಂಸಗೊಳ್ಳಬೇಕೆಂಬುದು ವಿಧಿಯ ನಿಯಮವಾಗಿದ್ದಿರಬೇಕು" ಎಂದಷ್ಟೇ ಹೇಳಿದ್ದರು.

ಅಲ್ಲಿ ಧ್ವಂಸವಾಗದೇ ಇದ್ದಿದ್ದರೆ ಕೋರ್ಟ್ ಗಳೂ ಕೂಡಾ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸುತ್ತಿದ್ದವೇನೋ ಎಂದಿದ್ದ ಕಲ್ಯಾಣ್ ಸಿಂಗ್ ಮಂದಿರ ನಿರ್ಮಾಣವಾಗುವವರೆಗೂ ಜೀವಿಸಬೇಕೆಂಬುದು ತಮ್ಮ ಕೊನೆಯ ಆಸೆ ಎಂದಿದ್ದರು.

1932 ರ ಜನವರಿ 5 ರಂದು ಜನಿಸಿ ಪಶ್ಚಿಮ ಉತ್ತರ ಪ್ರದೇಶದಲ್ಲಿ ಪ್ರಭಾವಿ ಹಿಂದುಳಿದ ವರ್ಗಗಳ ನಾಯಕರಾಗಿ ಹೊರಹೊಮ್ಮಿದ್ದ ಕಲ್ಯಾಣ್ ಸಿಂಗ್, ಮೊದಲ ಬಾರಿ ಶಾಸಕರಾಗಿದ್ದು 1967 ರಲ್ಲಿ. 1991 ರಲ್ಲಿ ಉತ್ತರ ಪ್ರದೇಶದಲ್ಲಿ ಮೊದಲ ಬಿಜೆಪಿ ಸಿಎಂ ಆಗಿ ಆಯ್ಕೆಯಾದವರೆಂಬ ಹೆಗ್ಗಳಿಕೆಯೂ ಕಲ್ಯಾಣ್ ಸಿಂಗ್ ಅವರದ್ದೇ.  ತಮ್ಮ ರಾಜಕೀಯ ಜೀವನದಲ್ಲಿ ಅವರು ಎರಡು ಬಾರಿ ಬಿಜೆಪಿ ತೊರೆದು ತಮ್ಮದೇ ಸ್ವಂತ ಪಕ್ಷ ಸ್ಥಾಪಿಸಿದ್ದರು.

2009 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎರಡನೇ ಬಾರಿಗೆ ಬಿಜೆಪಿಯಿಂದ ಹೊರನಡೆದಿದ್ದ ಅವರು, "ಬಿಜೆಪಿಯಲ್ಲಿ ತಮಗೆ ಅವಮಾನವಾಗಿದೆ, ರಾಜ್ಯದಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ನನ್ನ ಮಾತಿಗೆ ಬೆಲೆ ನೀಡಲಾಗುತ್ತಿಲ್ಲ" ಎಂದು ಆರೋಪಿಸಿದ್ದರು.

1999 ರಲ್ಲಿ ಮೊದಲ ಬಾರಿಗೆ ಬಿಜೆಪಿ ತೊರೆದಿದ್ದಾಗ ಪುನಃ ಪಕ್ಷಕ್ಕೆ ಸೇರ್ಪಡೆಗೊಳ್ಳುವುದು ರಾಜಕೀಯ ಪ್ರಮಾದ ಎಂದು ಹೇಳಿದ್ದರು. ಆದರೆ 2004 ರ ಲೋಕಸಭಾ ಚುನಾವಣೆಗೂ ಮುನ್ನ ಅವರು ಬಿಜೆಪಿಗೆ ವಾಪಸ್ಸಾಗಿದ್ದರು.

1967 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಕಲ್ಯಾಣ್ ಸಿಂಗ್, ಹಲವು ಬಾರಿ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಬಿಜೆಪಿಯಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದ ಅವರು, ತಮ್ಮ ಸಾರ್ವಜನಿಕ ಜೀವನದ ಸಂಧ್ಯಾ ಕಾಲದಲ್ಲಿ ರಾಜಸ್ಥಾನದ ರಾಜ್ಯಪಾಲರಾಗಿ ನೇಮಕಗೊಂಡಿದ್ದರು. 2019 ರಲ್ಲಿ ರಾಜಭವನದ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ಸಿಂಗ್ ಮತ್ತೆ ಬಿಜೆಪಿ ಸೇರ್ಪಡೆಗೊಂಡು ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿದ್ದರು.

ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ರಾಮ ಜನ್ಮಭೂಮಿ ವಿಷಯ ಮತ್ತೆ ಮುನ್ನೆಲೆಗೆ ಬಂದು ಸಂಘ ಪರಿವಾರದ ಅಭಿಯಾನ ಜೋರಾಗಿತ್ತು. ಒಂದು ವರ್ಷದ ನಂತರ ಬಾಬ್ರಿ ಮಸೀದಿ ಧ್ವಂಸವೂ ಆಯಿತು. ಆದರೆ ಈ ನಡುವೆ ಯಾವುದೇ ಕಾರಣಕ್ಕೂ ಬಾಬ್ರಿ ಮಸೀದಿ ಧ್ವಂಸವಾಗುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಲ್ಯಾಣ್ ಸಿಂಗ್ ಸುಪ್ರೀಂ ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದ್ದರು.

ಆದರೆ ಇತ್ತ ಕರಸೇವಕರು, ಪ್ರತಿಭಟನಾ ನಿರತರ ಮೇಲೆ ಗುಂಡು ಹಾರಿಸದಂತೆ, ಒಂದು ವೇಳೆ ಇಂತಹ ಘಟನೆಗಳು ರಕ್ತಪಾತಕ್ಕೆ ದಾರಿ ಮಾಡಿಕೊಡಲಿವೆ ಎಂದು ಪೊಲೀಸರಿಗೆ ಕಲ್ಯಾಣ್ ಸಿಂಗ್ ಆದೇಶ ನೀಡಿದ್ದರು. ಆದರೆ ತಮ್ಮ ವೈಫಲ್ಯ ಹಾಗೂ ಸುಪ್ರೀಂ ಕೋರ್ಟ್ ಗೆ ಕೊಟ್ಟ ಭರವಸೆ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಕಲ್ಯಾಣ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

ಈ ಘಟನೆಯಾದ ಬೆನ್ನಲ್ಲೇ ದೇಶಾದ್ಯಂತ ಗಲಭೆಗಳು ಉಂಟಾಗಿ ಉತ್ತರ ಪ್ರದೇಶದ ಶಾಸನ ಸಭೆಯನ್ನು ವಿಸರ್ಜಿಸಲಾಯಿತು. ನಂತರ 1993 ರ ಚುನಾವಣೆಯಲ್ಲಿ ಕಲ್ಯಾಣ್ ಸಿಂಗ್ ಅಟ್ರೌಲಿ ಹಾಗೂ ಕಸ್ಗಂಜ್ ನಲ್ಲಿ ಸ್ಪರ್ಧಿಸಿ ಎರಡೂ ಕ್ಷೇತ್ರಗಳಿಂದ ಗೆಲುವು ಕಂಡಿದ್ದರು.

ಆ ಚುನಾವಣೆಯಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನಗಳು ಬಂದಿದ್ದವಾದರೂ ಬಹುಮತಕ್ಕೆ ಅಗತ್ಯವಿದ್ದ ಸಂಖ್ಯೆ ಇರಲಿಲ್ಲ. ಪರಿಣಾಮ ಎಸ್ ಪಿ-ಬಿಎಸ್ ಪಿ ಮೈತ್ರಿ ಸರ್ಕಾರ ರಚನೆಯಾಗಿ ಮುಲಾಯಂ ಸಿಂಗ್ ಯಾದವ್ ಸಿಎಂ ಆದರು. ಕಲ್ಯಾಣ್ ಸಿಂಗ್ ಈ ಅವಧಿಯಲ್ಲಿ ವಿಪಕ್ಷ ನಾಯಕರಾಗಿದ್ದರು.

1997 ರಲ್ಲಿ ಬಿಎಸ್ ಪಿ ಜೊತೆ 6 ತಿಂಗಳ ಅವಧಿಗೆ ಅಧಿಕಾರ ಹಂಚಿಕೆಯ ಷರತ್ತಿನ ಮೇಲೆ ರಚನೆಯಾದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಕಲ್ಯಾಣ್ ಸಿಂಗ್ ಮತ್ತೆ ಸಿಎಂ ಆಗಿದ್ದರು. ಆದರೆ ಬಿಎಸ್ ಪಿ ಬೆಂಬಲ ವಾಪಸ್ ಪಡೆಯುವ ಮೂಲಕ ಎರಡನೇ ಅವಧಿಯನ್ನೂ ಕಲ್ಯಾಣ್ ಸಿಂಗ್ ಪೂರ್ಣಗೊಳಿಸಲಿಲ್ಲ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT