ನವದೆಹಲಿ: 20 ವರ್ಷ ಕಷ್ಟಪಟ್ಟು ಕಟ್ಟಿದ್ದ ಪ್ರಜಾಪ್ರಭುತ್ವ ಸಾಮ್ರಾಜ್ಯವನ್ನು ತಾಲಿಬಾನಿಗಳು ಕೆಲವೇ ಗಂಟೆಗಳಲ್ಲಿ ಸರ್ವನಾಶ ಮಾಡಿದರು ಎಂದು ಆಫ್ಘಾನಿಸ್ತಾನ ಸಂಸದ ನರೇಂದ್ರ ಸಿಂಗ್ ಖಾಲ್ಸಾ ಭಾವುಕರಾಗಿ ಹೇಳಿದ್ದಾರೆ.
ಇಂದು ಅಫ್ಘಾನಿಸ್ತಾನದಿಂದ ಭಾರತಕ್ಕೆ ಭಾನುವಾರ ಕರೆತರಲಾದ 168 ಮಂದಿಯ ಪೈಕಿ 24 ಸಿಖ್ಖರೂ ಸೇರಿದ್ದು ಇದರಲ್ಲಿ ಇಬ್ಬರು ಅಫ್ಘನ್ ಸಂಸದರೂ ಸೇರಿದ್ದಾರೆ. ಸುಮಾರು 150 ಭಾರತೀಯರು ಅಪಹರಣಕ್ಕೊಳಗಾಗಿ ಬಿಡುಗಡೆಯಾದ ಭಯಾನಕ ಘಟನೆಯ ಬಳಿಕ 168 ಮಂದಿ ಪ್ರಯಾಣಿಕರನ್ನು ಹೊತ್ತ ವಾಯುಪಡೆ ವಿಮಾನ ಭಾರತಕ್ಕೆ ತಲುಪಿದೆ. ಇದರಲ್ಲಿ 107 ಮಂದಿ ಭಾರತೀಯ ಪ್ರಜೆಗಳಿದ್ದರೆ, ಇನ್ನು ಇಬ್ಬರು ಅಫ್ಘನ್ ಸಂಸದರು ಹಾಗೂ 24 ಸಿಖ್ಖರು ಸೇರಿದ್ದಾರೆ ಎನ್ನಲಾಗಿದೆ.
ಇಂದು 168 ಮಂದಿಯನ್ನು ಹೊತ್ತು ಬಂದ ಸೇನಾ ಯುದ್ಧ ವಿಮಾನ ದೆಹಲಿ ಸಮೀಪದ ಹಿಂಡನ್ ವಾಯು ನೆಲೆಯಲ್ಲಿ ಇಳಿದಿದ್ದು, ಈ ವೇಳೆ ವಿಮಾನದಲ್ಲಿ ಬಂದಿದ್ದ ಅಫ್ಘಾನಿಸ್ತಾನದ ಸಿಖ್ ಸಂಸದ ನರೇಂದರ್ ಸಿಂಗ್ ಖಾಲ್ಸಾ ತಮ್ಮ ಅನುಭವ ನೆನೆದು ಕಣ್ಣೀರಿಟ್ಟರು.
'ನನಗೆ ತೀವ್ರ ಅಳು ಬರುತ್ತಿದೆ. ಕಳೆದ 20 ವರ್ಷಗಳಲ್ಲಿ ಕಟ್ಟಿದ ಪ್ರತಿಯೊಂದೂ ಈಗ ನಾಶವಾಗಿದೆ. ಅಲ್ಲಿ ಶೂನ್ಯವಷ್ಟೇ ಇದೆ. ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತುಂಬಾ ಹದಗೆಡುತ್ತಿದೆ. ಹೀಗಾಗಿ ನಾನು ನನ್ನ ಮಗಳು ಹಾಗೂ ಇಬ್ಬರು ಮೊಮ್ಮಕ್ಕಳೊಂದಿಗೆ ಇಲ್ಲಿಗೆ ಬಂದಿದ್ದೇನೆ. ನಮ್ಮ ಭಾರತೀಯ ಸಹೋದರರು ಹಾಗೂ ಸಹೋದರಿಯರು ನಮ್ಮ ರಕ್ಷಣೆಗೆ ಬಂದರು. ತಾಲಿಬಾನಿಗಳು ನನ್ನ ಮನೆಯನ್ನು ಸುಟ್ಟು ಕೆಡವಿದ್ದಾರೆ. ನಮಗೆ ಸಹಾಯ ಮಾಡಿದ್ದಕ್ಕೆ ಭಾರತ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಅಂತೆಯೇ 'ನಾವು ಪದೇ ಪದೇ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದೆವು. ಇಂತಹ ಪರಿಸ್ಥಿತಿಯಲ್ಲಿ ದೇಶ ತೊರೆಯುತ್ತೇವೆ ಎಂದು ಕನಸಿನಲ್ಲೂ ಭಾವಿಸಿರಲಿಲ್ಲ. ತಾಲಿಬಾನಿಗಳು ಕ್ರೂರ, ಅನಾಗರಿಕ ವ್ಯಕ್ತಿಗಳು. ನಾವು ಅನೇಕ ಸಂಕಷ್ಟಗಳನ್ನು ಎದುರಿಸುವಂತಾಯಿತು. ವಿಮಾನ ನಿಲ್ದಾಣದಲ್ಲಿ ಕೂಡ ತಾಲಿಬಾನಿಗಳು ಅಡ್ಡಗಟ್ಟಿದ್ದರು. 'ಇಲ್ಲಿಂದ ಹೋಗಬೇಡಿ. ಎಲ್ಲಿಗೆ ಹೋಗುತ್ತೀರಿ?' ಎಂದು ಗದರುತ್ತಿದ್ದರು. ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದ ಮೋದಿ ಸರ್ಕಾರಕ್ಕೆ ನಾವು ಧನ್ಯವಾದ ಸಲ್ಲಿಸುತ್ತೇವೆ' ಎಂದು ಮತ್ತೊಬ್ಬ ಪ್ರಜೆ ತಿಳಿಸಿದ್ದಾರೆ.