ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಹೇಳಿದ್ದ ಕೇಂದ್ರ ಸಚಿವ ನಾರಾಯಣ್ ರಾಣೆ ಮಂಗಳವಾರ ಅವರು ಮಂಗಳವಾರ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ತಾವು ಸಿಎಂ ವಿರುದ್ಧ ಹೇಳಿಕೆ ನೀಡುವ ಮೂಲಕ ಯಾವುದೇ ಅಪರಾಧ ಮಾಡಿಲ್ಲ ಎಂದು ಹೇಳಿದ್ದಾರೆ.
ಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆ ಸಂಬಂಧ ಕೇಂದ್ರ ಸಚಿವರನ್ನು ಬಂಧಿಸಲಾಗುವುದು ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿದ ರಾಣೆ, ನಾನು 'ಸಾಮಾನ್ಯ' ವ್ಯಕ್ತಿಯಲ್ಲ ಮತ್ತು ಇಂತಹ ಸುಳ್ಳು ವರದಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದರು.
"ನಾನು ಯಾವುದೇ ಅಪರಾಧ ಮಾಡಿಲ್ಲ. ನೀವು ಅದನ್ನು ಪರಿಶೀಲಿಸಿ ಟಿವಿಯಲ್ಲಿ ತೋರಿಸಬೇಕು, ಇಲ್ಲದಿದ್ದರೆ ನಾನು ನಿಮ್ಮ ವಿರುದ್ಧ (ಮಾಧ್ಯಮ) ಕೇಸು ದಾಖಲಿಸುತ್ತೇನೆ. ಯಾವುದೇ ಅಪರಾಧ ಮಾಡದಿದ್ದರೂ, ಮಾಧ್ಯಮಗಳು ನನ್ನ ಬಂಧನ 'ಸನ್ನಿಹಿತ' ಎಂಬ ಊಹಾತ್ಮಕ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ನಾನು ಸಾಮಾನ್ಯ(ಸಾಮಾನ್ಯ) ವ್ಯಕ್ತಿ ಎಂದು ನೀವು ಭಾವಿಸುತ್ತೀರಾ?" ಎಂದು ರಾಣೆ ವರದಿಗಾರರಿಗೆ ಪ್ರಶ್ನಿಸಿದರು.
ಸಿಎಂ ವಿರುದ್ಧ ಹೇಳಿಕೆಗೆ ಸಂಬಂಧಿಸಿದಂತೆ ಶಿವಸೇನಾ ಕಾರ್ಯಕರ್ತರು ತಮ್ಮ ವಿರುದ್ಧ ಕೇಸ್ ದಾಖಲಿಸಿದ್ದಾರೆ ಎಂಬ ವರದಿಗಾರರ ಪ್ರಶ್ನೆಗೆ, "ಶಿವಸೇನೆ ಯಾರು?" ಎಂದು ಕೇಂದ್ರ ಸಚಿವರು ಮರು ಪ್ರಶ್ನಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಯಾವ ವರ್ಷ ಎಂಬುದನ್ನು ತಿಳಿಯದೇ ಇರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಸೋಮವಾರ ರಾಯಗಡದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ನಾರಾಯಣ ರಾಣೆ ಹೇಳಿದ್ದರು.
ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಧ್ವಜಾರೋಹಣ ನಡೆಸಿ ಭಾಷಣ ಮಾಡುತ್ತಿದ್ದ ವೇಳೆ ಸ್ವಾತಂತ್ರ್ಯ ಲಭಿಸಿದ ವರ್ಷವನ್ನು ಪಕ್ಕದವರಿಂದ ಕೇಳಿ ತಿಳಿದುಕೊಂಡು ಹೇಳಿದ್ದರು. ಇದನ್ನು ಉಲ್ಲೇಖಿಸಿ ರಾಣೆ ಹೇಳಿಕೆ ನೀಡಿದ್ದರು.
ರಾಣೆ ಹೇಳಿಕೆಗೆ ಶಿವಸೇನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಚಿವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದೆ. ಈ ಹಿನ್ನೆಲಯಲ್ಲಿ ರಾಣೆ ಅವರ ನಿವಾಸದ ಭತ್ರತೆಯನ್ನು ಹೆಚ್ಚಿಸಲಾಗಿದೆ.