ದೇಶ

ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

Lingaraj Badiger

ಚೆನ್ನೈ: ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ತಮಿಳುನಾಡು ವಿಧಾನಸಭೆಯಲ್ಲಿ ಶನಿವಾರ ನಿರ್ಣಯ ಅಂಗೀಕರಿಸಲಾಗಿದೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ನಿರ್ಣಯ ಮಂಡಿಸಿದರು. ಬಳಿಕ ಧ್ವನಿಮತದ ಮೂಲಕ ನಿರ್ಣಯವನ್ನು ಅಂಗೀಕರಿಸಲಾಯಿತು.

ಬಿಜೆಪಿಯ ಮಿತ್ರ ಪಕ್ಷಗಳಲ್ಲಿ ಒಂದಾದ ಪಿಎಂಕೆ ಹಾಗೂ ಡಿಎಂಕೆ ಮಿತ್ರ ಪಕ್ಷಗಳು ನಿರ್ಣಯವನ್ನು ಬೆಂಬಲಿಸಿದರೆ, ಎಐಎಡಿಎಂಕೆ ಮತ್ತು ಬಿಜೆಪಿ ವಾಕೌಟ್ ಮಾಡುವ ಮೂಲಕ ನಿರ್ಣಯವನ್ನು ವಿರೋಧಿಸಿದವು.

ಚರ್ಚೆಯ ಕೊನೆಯಲ್ಲಿ, ಕೇಂದ್ರ ಮೂರು ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಿದ ರೈತರು ಮತ್ತು ಇತರರ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವುದಾಗಿ ಮುಖ್ಯಮಂತ್ರಿ ಘೋಷಿಸಿದರು.

ಈ ಮೂರು ಶಾಸನಗಳು ಕೃಷಿಗೆ ವಿರುದ್ಧವಾಗಿದ್ದು, ರೈತರಿಗೆ ಮಾರಕವಾಗಿವೆ. "ಆದ್ದರಿಂದ, ಈ ಶಾಸನಗಳನ್ನು ವಿರೋಧಿಸುವುದು ನಮ್ಮ ಕರ್ತವ್ಯವಾಗಿದೆ" ಎಂದು ಮುಖ್ಯಮಂತ್ರಿಗಳು ಹೇಳಿದರು.

ರೈತರು ಒಂದೇ ಒಂದು ವಿಷಯವನ್ನು ನಿರೀಕ್ಷಿಸುತ್ತಿದ್ದಾರೆ. ಅದು ಅವರ ಉತ್ಪನ್ನಗಳಿಗೆ ಸಮಂಜಸವಾದ ಬೆಲೆ. ಆದರೆ ಈ ಮೂರು ಶಾಸನಗಳು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಬಗ್ಗೆ ಮಾತನಾಡಲಿಲ್ಲ. 

ಸ್ವಾತಂತ್ರ್ಯದ ನಂತರ, ಮೊದಲ ಬಾರಿಗೆ, ರೈತರು ಈ ಮೂರು ಶಾಸನಗಳನ್ನು ವಿರೋಧಿಸಿ ರಸ್ತೆಗಿಳಿದಿದ್ದಾರೆ ಮತ್ತು ಅವರು ಈ ಶಾಸನಗಳ ವಿರುದ್ಧ ದೀರ್ಘಕಾಲ ಹೋರಾಡುತ್ತಿದ್ದಾರೆ ಎಂದು ಸ್ಟಾಲಿನ್ ಹೇಳಿದರು.

SCROLL FOR NEXT